Supreme Court, Delhi and Haryana 
ಸುದ್ದಿಗಳು

ಬಿಸಿಗಾಳಿ ನಡುವೆ ದೆಹಲಿಯಲ್ಲಿ ನೀರಿಗೆ ಹಾಹಾಕಾರ: ಪಾಲುದಾರ ರಾಜ್ಯಗಳ ಸಭೆ ನಡೆಸಲು ಸುಪ್ರೀಂ ಸೂಚನೆ

Bar & Bench

ಹಿಮಾಚಲ ಪ್ರದೇಶದಿಂದ ಹರಿಯಾಣ ಮಾರ್ಗವಾಗಿ ಹೆಚ್ಚುವರಿ ನೀರು ಪೂರೈಸುವಂತೆ ದೆಹಲಿ ಸರ್ಕಾರ ಕೋರಿದ್ದ ಬೇಡಿಕೆ ಈಡೇರಿಸಲು ಸಂಬಂಧಿತ ಪಾಲುದಾರ ರಾಜ್ಯಗಳ ಸಭೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ [ದೆಹಲಿ ಸರ್ಕಾರ ಮತ್ತು ಹರಿಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಹಿಮಾಚಲ ಪ್ರದೇಶದಿಂದ ರಾಷ್ಟ್ರ ರಾಜಧಾನಿಗೆ ನೀರು ಪೂರೈಸಲು ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ರಜಾಕಾಲೀನ ಪೀಠ ಈ ಆದೇಶ ನೀಡಿದೆ.

"ಎಲ್ಲಾ ಪಾಲುದಾರರ ಜಂಟಿ ಸಭೆ ಏಕೆ ಸಾಧ್ಯವಿಲ್ಲ?" ಎಂದು ವಿಚಾರಣೆಯ ಆರಂಭದಲ್ಲಿ ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರನ್ನು ನ್ಯಾಯಾಲಯ ಪ್ರಶ್ನಿಸಿತು.

ಪ್ರಕರಣ ಈಗಾಗಲೇ ಯಮುನಾ ನದಿ ಮೇಲ್ದಂಡೆ ಮಂಡಳಿ ಎದುರು ಇದೆ ಎಂದ ಎಸ್‌ಜಿ ಮೆಹ್ತಾ ರಾಷ್ಟ್ರ ರಾಜಧಾನಿಯಲ್ಲಿ ನೀರು ಪೋಲಾಗುತ್ತಿರುವ ಕುರಿತೂ ಬೆರಳು ಮಾಡಿದರು.

ದೆಹಲಿ ಸರ್ಕಾರ ಸೋರಿಕೆ ನಿಯಂತ್ರಿಸಬೇಕು. ಟ್ಯಾಂಕರ್ ಮಾಫಿಯಾ ಮತ್ತಿತರ ಕಾರಣಗಳಿಗಾಗಿ ಶೇ 52ಕ್ಕಿಂತ ಹೆಚ್ಚು ನೀರು ಪೋಲಾಗುತ್ತಿದೆ ಎಂದು ಅವರು ವಿವರಿಸಿದರು.  

ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ದೆಹಲಿಯಲ್ಲಿ ತೀವ್ರ ಬಿಸಿಲಿನ ವಾತಾವರಣವಿದ್ದು, ವಜೀರಾಬಾದ್ ಜಲ ಸಂಸ್ಕರಣಾ ಘಟಕದಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಹಂತದಲ್ಲಿ, ಸಂಬಂಧಪಟ್ಟ ಪಾಲುದಾರ ರಾಜ್ಯ ಸರ್ಕಾರಗಳ ಸಭೆ ನಡೆಸುವಂತೆ ಪೀಠ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಸೂಚಿಸಿತು. ಆಗ ಜೂನ್ 5ರಂದು ಸಭೆ ನಡೆಸುವುದಾಗಿ ಮೆಹ್ತಾ ತಿಳಿಸಿದರು.

ಇತ್ತ ಹಿಮಾಚಲ ಪ್ರದೇಶ ಪರ ವಕೀಲರು ವಾದ ಮಂಡಿಸಿ ಕಾಲುವೆ ಮೂಲಕ ದೆಹಲಿಗೆ ನೀರು ಒದಗಿಸಲು ರಾಜ್ಯ ಸಿದ್ಧ ಇರುವುದಾಗಿ ತಿಳಿಸಿದರು.  

ಜೂನ್ 6 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಪ್ರಸ್ತುತ 50 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದೊಂದಿಗೆ ಬಿಸಿಗಾಳಿಯಿಂದ ಬಳಲುತ್ತಿರುವ ದೆಹಲಿಗೆ ನೀರಿನ ತೀವ್ರ ಅವಶ್ಯಕತೆ ಇದೆ ಎಂದು ಅಲ್ಲಿನ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.