ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆ ಮುಂದುವರಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿಸಿದೆ.
ಅಂಬಾನಿ ಕುಟುಂಬ ಸದಸ್ಯರಿಗೆ ಭದ್ರತೆ ಮುಂದುವರಿಸುವುದಕ್ಕೆ ಸಂಬಂಧಿಸಿದ ವಿಚಾರವನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.
“ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರ ಹೈಕೋರ್ಟ್ ಪ್ರಕ್ರಿಯೆ ಮುಂದುವರಿಸಲು ಯಾವುದೇ ಸಕಾರಣ ನಮಗೆ ಕಾಣುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಂಬಾನಿ ಕುಟುಂಬಕ್ಕೆ ಇರುವ ಬೆದರಿಕೆಗೆ ಸಂಬಂಧಿಸಿದಂತೆ ಮೂಲ ದಾಖಲೆ ಸಲ್ಲಿಸುವಂತೆ ಆದೇಶಿಸಿದ್ದ ತ್ರಿಪುರ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ರಜಾಕಾಲೀನ ಪೀಠವು ಜೂನ್‌ನಲ್ಲಿ ನೋಟಿಸ್ ಜಾರಿ ಮಾಡಿತ್ತು. ಮೂಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು. ಮತ್ತೆ ಪ್ರಕರಣವನ್ನು ಮುಂದೂಡುವುದಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ಅಂಬಾನಿ ಮತ್ತು ಕುಟುಂಬ ಸದಸ್ಯರಿಗೆ ಕಲ್ಪಿಸಿರುವ ಭದ್ರತೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿತ್ತು. ಗಂಭೀರ ಬೆದರಿಕೆಯನ್ನು ಆಧರಿಸಿ ಅಂಬಾನಿ ಕುಟುಂಬಕ್ಕೆ ಭದ್ರತೆ ಕಲ್ಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ನ್ಯಾಯಾಲಯಕ್ಕೆ ತಿಳಿಸಿತ್ತು. ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸ್ಥಿತಿಗತಿ ವರದಿ ಸಲ್ಲಿಸಲು ನಿರಾಕರಿಸಿತ್ತು. ಈಗಾಗಲೇ ಈ ಸಂಬಂಧ ಬಾಂಬೆ ಹೈಕೋರ್ಟ್ ನಿರ್ಧರಿಸಿದೆ ಎಂಬುದು ಕೇಂದ್ರದ ವಾದವಾಗಿತ್ತು.