ಸುದ್ದಿಗಳು

ಭಾಷಾ ನೀತಿ ಮತ್ತು ವರ್ಗಾವಣೆ ನಡುವಿನ ಸಂಬಂಧವನ್ನು ಸುಪ್ರೀಂ ಕೊಲಿಜಿಯಂ, ಕೇಂದ್ರ ಅರಿಯಲಿ: ಹಿರಿಯ ವಕೀಲ ಬಿ ವಿ ಆಚಾರ್ಯ

ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್‌, ಕೆ ನಟರಾಜನ್‌, ಎನ್‌ ಎಸ್‌ ಸಂಜಯ್‌ ಗೌಡ ಮತ್ತು ಹೇಮಂತ್‌ ಚಂದನಗೌಡರ್‌ ಅವರ ವರ್ಗಾವಣೆ ವಿರೋಧಿಸಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಹೈಕೋರ್ಟ್‌ನ ಗೋಲ್ಡನ್‌ ಗೇಟ್‌ ಬಳಿ ಪ್ರತಿಭಟನೆ ನಡೆಸಿದ ವಕೀಲರು.

Bar & Bench

“ಭಾಷಾ ನೀತಿ ಮತ್ತು ವರ್ಗಾವಣೆಯು ಅವಿನಾಭಾವ ಸಂಬಂಧ ಹೊಂದಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮತ್ತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು” ಎಂದು ಅಂತಾರಾಷ್ಟ್ರೀಯ ಕಮಿಷನ್‌ ಆಫ್‌ ಜೂರಿಸ್ಟ್‌ನ ಕರ್ನಾಟಕ ಘಟಕ ಹಾಗೂ ರಾಜ್ಯದ ಜೂರಿಸ್ಟ್‌ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಹಿರಿಯ ವಕೀಲ ಬಿ ವಿ ಆಚಾರ್ಯ ಆಗ್ರಹಿಸಿದರು.

ನ್ಯಾಯಮೂರ್ತಿಗಳಾದ ಕೃಷ್ಣ ಎಸ್.‌ ದೀಕ್ಷಿತ್‌, ಕೆ ನಟರಾಜನ್‌, ಎನ್‌ ಎಸ್‌ ಸಂಜಯ್‌ ಗೌಡ ಮತ್ತು ಹೇಮಂತ್‌ ಚಂದನಗೌಡರ್‌ ಅವರ ವರ್ಗಾವಣೆ ವಿರೋಧಿಸಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಹೈಕೋರ್ಟ್‌ನ ಗೋಲ್ಡನ್‌ ಗೇಟ್‌ ಮುಂದೆ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ನ್ಯಾಯಮೂರ್ತಿಗಳ ವರ್ಗಾವಣೆ ಮತ್ತು ಭಾಷಾ ನೀತಿಗೆ ಹತ್ತಿರದ ಸಂಬಂಧವಿದೆ. ಎಲ್ಲಾ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆ ಇರಬೇಕು ಎಂದು ಕೂಗು ಜೋರಾಗಿದೆ. ಕನ್ನಡದಲ್ಲಿ ತೀರ್ಪು ಬರೆದ ನ್ಯಾಯಮೂರ್ತಿಗಳಿಗೆ ಬಹುಮಾನ ಮತ್ತು ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದೇವೆ. ಹೀಗಿರುವಾಗ ಹೈಕೋರ್ಟ್‌ಗೆ ಕನ್ನಡದ ಬಾರದ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿದರೆ ತೊಂದರೆಯಾಗುತ್ತದೆ. ಅನುವಾದವೂ ಸಮಸ್ಯೆಯಾಗುತ್ತದೆ. ಸಮರ್ಥವಾದ ನಮ್ಮ ನಾಲ್ವರು ನ್ಯಾಯಮೂರ್ತಿಗಳನ್ನು ಬೇರೆ ಬೇರೆ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ಈ ನ್ಯಾಯಮೂರ್ತಿಗಳಿಗೆ ಬೇರೆ ಹೈಕೋರ್ಟ್‌ಗೆ ಹೋದಾಗ ಅಲ್ಲಿನ ಭಾಷೆ ತಿಳಿಯದೇ ಅವರ ಸಾಮರ್ಥ್ಯ ಕಡಿಮೆಯಾಗುತ್ತದೆ. ಹೀಗಾಗಿ, ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮತ್ತು ಕೇಂದ್ರ ಸರ್ಕಾರವು ಅವಿನಾಭಾವ ಸಂಬಂಧ ಹೊಂದಿರುವ ವರ್ಗಾವಣೆ ಮತ್ತು ಭಾಷೆಯ ಬಗ್ಗೆ ನಿರ್ಧಾರ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಅಲ್ಲದೇ, ಎಎಬಿ ಹಾಗೂ ಹಿರಿಯ ವಕೀಲರನ್ನು ಒಳಗೊಂಡ ವಕೀಲ ಸಮುದಾಯವು ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಕಮಿಷನ್‌ ಆಫ್‌ ಜೂರಿಸ್ಟ್‌ನ ಕರ್ನಾಟಕ ಘಟಕ ಮತ್ತು ರಾಜ್ಯದ ಜೂರಿಸ್ಟ್‌ ಟ್ರಸ್ಟ್‌ನ ಸಂಪೂರ್ಣ ಬೆಂಬಲ ನೀಡಲಾಗಿದೆ ಎಂದು ಘೋಷಿಸಿದರು.

ಎಎಬಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅವರು “ಬೇರೆ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನು ಇಲ್ಲಿಗೆ ವರ್ಗಾಯಿಸುತ್ತಿರುವುದು ಸರಿಯಲ್ಲ. ಕರ್ನಾಟಕ ಕಸದಬುಟ್ಟಿಯಾಗಿದೆಯೇ ಎಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅನ್ನು ಕೇಳಲು ಬಯಸುತ್ತೇವೆ. ನಮ್ಮ ನ್ಯಾಯಮೂರ್ತಿಗಳನ್ನು ಬೇರೆ ಕಡೆಗೆ ವರ್ಗಾಯಿಸುವುದರಿಂದ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ” ಎಂದರು.

“ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ಮಾಡಿರುವ ಕೊಲಿಜಿಯಂ ತನ್ನ ಶಿಫಾರಸ್ಸು ಹಿಂಪಡೆಯಬೇಕು. ಕಾನೂನು ಸಚಿವರಿಗೆ ಈ ವರ್ಗಾವಣೆಗೆ ಮಾನ್ಯತೆ ನೀಡದಂತೆ ಮನವಿ ಮಾಡುತ್ತೇವೆ. ವರ್ಗಾವಣೆಗೊಂಡಿರುವ ನ್ಯಾಯಮೂರ್ತಿಗಳು ಎಲ್ಲರನ್ನು ಸಮಾನವಾಗಿ ಕಂಡಿದ್ದಾರೆ. ಎಎಬಿ ಪದಾಧಿಕಾರಿಗಳು ಮತ್ತು ಹಿರಿಯ ವಕೀಲರು ಸಿಜೆಐ ಮತ್ತು ಕಾನೂನು ಮಂತ್ರಿಗಳನ್ನು ಭೇಟಿ ಮಾಡುತ್ತೇವೆ. ವರ್ಗಾವಣೆ ಹಿಂಪಡೆಯುವವರೆಗೂ ಕಲಾಪ ಬಹಿಷ್ಕರಿಸುತ್ತೇವೆ ಮತ್ತು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕಾನೂನು ಮಂತ್ರಿ ಮತ್ತು ಸಿಜೆಐಗೆ 35 ಹಿರಿಯ ವಕೀಲರು ಸಹಿ ಹಾಕಿ ಪತ್ರ ಕಳುಹಿಸಿದ್ದು, ವರ್ಗಾವಣೆ ಹಿಂಪಡೆಯುವಂತೆ ಕೋರಿದ್ದಾರೆ” ಎಂದರು.

ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಉದಯ್‌ ಹೊಳ್ಳ, ಡಿಎಲ್‌ಎನ್‌ ರಾವ್‌, ಲಕ್ಷ್ಮಿನಾರಾಯಣ, ಕೆ ಎನ್‌ ಫಣೀಂದ್ರ, ಡಿ ಆರ್‌ ರವಿಶಂಕರ್‌, ವಿಕ್ರಮ್‌ ಹುಯಿಲಗೋಳ ಮತ್ತಿತರರು ಭಾಗವಹಿಸಿದ್ದರು.