ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗೆ ಐವರ ಹೆಸರು ಶಿಫಾರಸ್ಸು ಮಾಡಿದ ಸುಪ್ರೀಂ ಕೋರ್ಟ್‌ ಕೊಲಿಜಿಯಂ

Bar & Bench

ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇಗೌಡ ಮತ್ತು ಹಾಲಿ ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಧೀಶರಾಗಿರುವ ಚಂದ್ರಶೇಖರ ಮೃತ್ಯುಂಜಯ ಜೋಶಿ ಹಾಗೂ ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಅನಿಲ್‌ ಭೀಮಸೇನ ಕಟ್ಟಿ ಸೇರಿದಂತೆ ಐವರನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದೆ.

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಗುರುಸಿದ್ದಯ್ಯ ಬಸವರಾಜ ಮತ್ತು ರಾಜ್ಯ ಕೈಗಾರಿಕಾ ನ್ಯಾಯ ಮಂಡಳಿಯ ಮೇಲುಸ್ತುವಾರಿ ಅಧಿಕಾರಿ ಹಾಗೂ ಹಿಂದಿನ ಧಾರವಾಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿದ್ದ ಉಮೇಶ್‌ ಮಂಜುನಾಥ್‌ ಭಟ್‌ ಅಡಿಗ ಅವರನ್ನೂ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಜುಲೈ 19ರಂದು ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದೆ.

ಚಂದ್ರಶೇಖರ ಮೃತ್ಯುಂಜಯ ಜೋಶಿ ಅವರು 2022ರ ಮೇ 4ರಂದು ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ್ದರು. ಇದಕ್ಕೂ ಮುನ್ನ ಅವರು ಬೆಳಗಾವಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿದ್ದರು. ಅನಿಲ್‌ ಭೀಮಸೇನ ಕಟ್ಟಿ ಅವರು 2020ರ ಮೇ 11ರಿಂದ 2022ರ ಏಪ್ರಿಲ್‌ 30ರವರೆಗೆ ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಧೀಶರಾಗಿದ್ದರು. ನಿವೃತ್ತ ನ್ಯಾ. ಕಟ್ಟಿ ಅವರು ಸೇವೆಯಲ್ಲಿರುವಾಗಲೇ ಅವರ ಹೆಸರನ್ನು ಒಳಗೊಂಡ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸಿಕೊಡಲಾಗಿತ್ತು. ಹೀಗಾಗಿ, ಅವರ ಹೆಸರನ್ನು ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಲಾಗಿದೆ. ಹುದ್ದೆಯಲ್ಲಿದ್ದಾಗ ಶಿಫಾರಸ್ಸು ಮಾಡಿದ್ದರೆ ನೇಮಕಾತಿಗೆ ಅವಕಾಶವಿದೆ.

ಕರ್ನಾಟಕ ಹೈಕೋರ್ಟ್‌ 2022ರ ಜುಲೈ 1ರಂತೆ 45 ನ್ಯಾಯಮೂರ್ತಿಗಳನ್ನು ಹೊಂದಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಸದ್ಯ 17 ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ.