ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರನ್ನು ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಮತ್ತು ತೆಲಂಗಾಣ ಮೂಲದ ತ್ರಿಪುರ ಹೈಕೋರ್ಟ್ನ ಹಾಲಿ ಮುಖ್ಯ ನ್ಯಾಯಮೂರ್ತಿ ಎಂ ಎಸ್ ರಾಮಚಂದ್ರ ರಾವ್ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಕೊಲಿಜಿಯಂ ಸಭೆ ಮಂಗಳವಾರ ಈ ಕುರಿತಂತೆ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
2025ರ ಜುಲೈ 19ರಿಂದ ವಿಭು ಬಕ್ರು ಅವರು ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನ್ಯಾಯಮೂರ್ತಿ ಎಂ ಎಸ್ ರಾಮಚಂದ್ರ ರಾವ್ ಅವರು 1966ರ ಆಗಸ್ಟ್ 7ರಂದು ಹೈದರಾಬಾದ್ನಲ್ಲಿ ಜನಿಸಿದ್ದರು. ಅವರು 1989ರಲ್ಲಿ ಹೈದರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ವಿಶ್ವವಿದ್ಯಾಲಯ ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು. ಅಂತಿಮ ವರ್ಷದ ಎಲ್ಎಲ್ಬಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದಕ್ಕಾಗಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಚಿನ್ನದ ಪದಕವನ್ನು ಪಡೆದರು. 1989ರ ಸೆಪ್ಟೆಂಬರ್ 7ರಿಂದ ವಕೀಲಿಕೆ ಆರಂಭಿಸಿದ್ದರು. 2012ರ ಜೂನ್ 29ರಂದು ಆಂಧ್ರಪ್ರದೇಶ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ಪದೋನ್ನತಿ ಪಡೆದು, 2013ರ ಡಿಸೆಂಬರ್ 4ರಂದು ಸೇವೆಗೆ ಕಾಯಂಗೊಂಡಿದ್ದರು.
2021ರ ಆಗಸ್ಟ್ 31ರಂದು ತೆಲಂಗಾಣ ರಾಜ್ಯದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆಗಿ ಪದೋನ್ನತಿ ಪಡೆದಿದ್ದರು. ನಂತರ 2021ರ ಅಕ್ಟೋಬರ್ 12ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡಿದ್ದರು. 2023ರ ಮೇ30ರಂದು ಹಿಮಾಚಲ ಪ್ರದೇಶದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 2024ರ ಸೆಪ್ಟೆಂಬರ್ 21ರಂದು ಜಾರ್ಖಂಡ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆಯಾಗಿದ್ದರು. ಅವರನ್ನು ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲು ಇದೀಗ ಸುಪ್ರೀಂಕೋರ್ಟ್ ಕೊಲಿಜಿಂಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.