ಅಜಯ್ ಮಿಶ್ರಾ ಟೇನಿ ಮತ್ತು ಸುಪ್ರೀಂ ಕೋರ್ಟ್
ಅಜಯ್ ಮಿಶ್ರಾ ಟೇನಿ ಮತ್ತು ಸುಪ್ರೀಂ ಕೋರ್ಟ್ 
ಸುದ್ದಿಗಳು

ಕೊಲೆ ಪ್ರಕರಣ: ಕೇಂದ್ರ ಸಚಿವ ಅಜಯ್‌ ಮಿಶ್ರಾ ಟೇನಿ ಖುಲಾಸೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

Bar & Bench

ದಶಕಗಳ ಹಿಂದಿನ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೇನಿ ಅವರನ್ನು ಖುಲಾಸೆಗೊಳಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ [ರಾಜೀವ್‌ ಗುಪ್ತಾ ಮತ್ತು ಅಜಯ್‌ ಮಿಶ್ರಾ ಅಲಿಯಾಸ್‌ ಟೇನಿ ಇನ್ನಿತರರ ನಡುವಣ ಪ್ರಕರಣ].

ಕೆಳ ನ್ಯಾಯಾಲಯಗಳ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಒಲವಿಲ್ಲ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಮೂಲ ದೂರುದಾರರ ಕಾನೂನಾತ್ಮಕ ವಾರಸುದಾರ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದೆ.

ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಕಳೆದ ವರ್ಷ ಮೇ ತಿಂಗಳಲ್ಲಿ ಟೇನಿ ಅವರನ್ನು ಖುಲಾಸೆಗೊಳಿದ್ದ ಆದೇಶವನ್ನು ಎತ್ತಿಹಿಡಿದಿತ್ತು .

ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ಟಿಕೋನಿಯಾದಲ್ಲಿ ವಿದ್ಯಾರ್ಥಿ ನಾಯಕ ಪ್ರಭಾತ್ ಗುಪ್ತಾ ಅವರನ್ನು ಅವರ ಮನೆಯ ಬಳಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಟೇನಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಘಟನಾವಳಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಸಂಪೂರ್ಣ ವಿಫಲವಾಗಿದೆ ಎಂದು ತೀರ್ಮಾನಿಸಿದ್ದ ವಿಚಾರಣಾ ನ್ಯಾಯಾಲಯ 2004ರಲ್ಲಿ ಟೇನಿ ಅವರನ್ನು ಖುಲಾಸೆಗೊಳಿಸಿತ್ತು ಇದನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಅಲಾಹಾಬಾದ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು. ಮೇ 2023 ರಲ್ಲಿ, ಟೇನಿ ಅವರ ಖುಲಾಸೆಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು.

ಕೃಷಿ ವಿರೋಧಿ ಕಾಯಿದೆಗಳ (ಈಗ ಹಿಂಪಡೆಯಲಾಗಿದೆ) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿದಂತೆ ಎಂಟು ಮಂದಿಯ ಸಾವಿಗೆ ಕಾರಣವಾದ 2021ರ ಲಖೀಂಪುರ್‌ ಖೇರಿ ಹಿಂಸಾಚಾರ ಘಟನೆಯಲ್ಲಿ ಟೇನಿ ಅವರ ಪುತ್ರ ಆಶಿಶ್‌ ಮಿಶ್ರಾ ಅವರ ಹೆಸರು ಕೇಳಿ ಬಂದಿತ್ತು. ಮಿಶ್ರಾ ಅವರು ಚಲಾಯಿಸುತ್ತಿದ್ದ ವಾಹನ ಹರಿದು ಪ್ರತಿಭಟನಾ ನಿರತ ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದರು. ಆಶಿಶ್‌ ಮಿಶ್ರಾ ಅವರು ಪ್ರಸ್ತುತ ಜಾಮೀನು ಪಡೆದಿದ್ದಾರೆ.