Supreme Court Constitution Bench 
ಸುದ್ದಿಗಳು

ಎಂಟು ಪ್ರಕರಣಗಳ ವಿಚಾರಣೆಗೆ ಎರಡು ಸಾಂವಿಧಾನಿಕ ಪೀಠಗಳ ರಚಿಸಿದ ಸುಪ್ರೀಂ ಕೋರ್ಟ್

ನಿಕಾಹ್ ಹಲಾಲಾ ಆಚರಣೆ ಪ್ರಶ್ನಿಸಿರುವ ಮತ್ತು ದೇಶದಲ್ಲಿ ಮೇಲ್ಮನವಿ ನ್ಯಾಯಾಲಯಗಳ ಅಗತ್ಯ ಕುರಿತಾದ ಪ್ರಕರಣಗಳನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ.

Bar & Bench

ಸಾಂವಿಧಾನಿಕ ಮಹತ್ವದ 8 ಪ್ರಕರಣಗಳ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಎರಡು ಐದು ನ್ಯಾಯಾಧೀಶರ ಸಂವಿಧಾನ ಪೀಠಗಳನ್ನು ರಚಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆ ಬಿ ಪರ್ದಿವಾಲಾ ಅವರನ್ನು ಮೊದಲ ಸಾಂವಿಧಾನಿಕ ಪೀಠ ಒಳಗೊಂಡಿದೆ. ಪೀಠ ಈ ಕೆಳಗಿನ ನಾಲ್ಕು ಪ್ರಕರಣಗಳ ವಿಚಾರಣೆ ನಡೆಸಲಿದೆ:

  1. ಸಂವಿಧಾನದ 15 ಮತ್ತು 16 ನೇ ವಿಧಿಗಳ ಸಲುವಾಗಿ ಮುಸ್ಲಿಮರು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯ ಎಂದು ಘೋಷಿಸಬಹುದೇ?

  2. ಸಿಖ್ ಸಮುದಾಯದ ಸದಸ್ಯರಿಗೆ 50 ಪ್ರತಿಶತದಷ್ಟು ಸೀಟುಗಳನ್ನು ಮೀಸಲಿಡಲು ಅವಕಾಶ ನೀಡಿ ಪಂಜಾಬ್ ರಾಜ್ಯದಲ್ಲಿ ಸಿಖ್ ಶಿಕ್ಷಣ ಸಂಸ್ಥೆಗಳನ್ನು 'ಅಲ್ಪಸಂಖ್ಯಾತ' ಎಂದು ಘೋಷಿಸುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿರುವ ಅರ್ಜಿ.

  3. ಉಚ್ಚ ನ್ಯಾಯಾಲಯಗಳ ಮೇಲ್ಮನವಿಗಳನ್ನು ಆಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಪ್ರತ್ಯೇಕ ನ್ಯಾಯವ್ಯಾಪ್ತಿ ಇರುವ ಮೇಲ್ಮನವಿ ನ್ಯಾಯಾಲಯಗಳ ಬೇಡಿಕೆಗೆ ಸಂಬಂಧಿಸಿದ ಮನವಿ.

  4. ಭಾರತೀಯ ಚುನಾವಣಾ ಆಯೋಗದ (ಇಸಿಐ) ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಕಾರ್ಯಾಂಗಕ್ಕೆ ಇರುವ ಪ್ರಸ್ತುತ ವ್ಯವಸ್ಥೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ.

ಎರಡನೇ ಸಾಂವಿಧಾನಿಕ ಪೀಠವು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಹೇಮಂತ್ ಗುಪ್ತಾ, ಸೂರ್ಯ ಕಾಂತ್, ಎಂ ಎಂ ಸುಂದ್ರೇಶ್ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡಿದೆ. ಈ ಪೀಠ ಕೆಳಗಿನ ಪ್ರಕರಣಗಳನ್ನು ಆಲಿಸಲಿದೆ:

  1. ಆಯ್ಕೆಯ ಮಾನದಂಡವನ್ನು ಮಧ್ಯದಲ್ಲಿ ಅಥವಾ ಆಯ್ಕೆಯ ಪ್ರಕ್ರಿಯೆ ಆರಂಭವಾದ ನಂತರ ಸಂಬಂಧಪಟ್ಟ ಅಧಿಕಾರಿಗಳು ಬದಲಾಯಿಸಬಹುದೇ?

  2. ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ಸಂಬಂಧಿಸಿದಂತೆ ಹಿಂದೆ ನೀಡಲಾಗಿದ್ದ ತೀರ್ಪುಗಳ ಸಿದ್ಧಾಂತಕ್ಕೆ ಸಂಬಂಧಿಸಿದ ಪ್ರಕರಣ.

  3. ನಿಕಾಹ್ ಹಲಾಲಾ, ನಿಕಾಹ್ ಮುತಾಹ್ ಮತ್ತು ನಿಕಾಹ್ ಮಿಸ್ಯಾರ್ ಸೇರಿದಂತೆ ಬಹುಪತ್ನಿತ್ವದ ಪ್ರಚಲಿತ ಆಚರಣೆ ಪ್ರಶ್ನಿಸಿರುವ ಅರ್ಜಿ.

  4. ಸಂವಿಧಾನದ 161ನೇ ವಿಧಿಯ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿ ರಾಜ್ಯಪಾಲರ ಮುಂದೆ ದಾಖಲೆಗಳನ್ನು ಇರಿಸದೆ ಕಾರ್ಯಾಂಗವು ಅಪರಾಧಿಗಳ ಶಿಕ್ಷೆಯನ್ನು ತಗ್ಗಿಸುವ ನೀತಿಯನ್ನು ರೂಪಿಸಬಹುದೇ ಎನ್ನುವ ವಿಚಾರ.

ಇವುಗಳಿಗೆ ಸಂಬಂದಿಸಿದಂತೆ ನಿರ್ದೇಶನಗಳನ್ನು ನೀಡುವಂತೆ ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ. ಅರ್ಥಾತ್‌ ಯಾವುದೇ ಸುದೀರ್ಘ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುವುದಿಲ್ಲ. ಆದರೆ ಅಂತಿಮ ವಿಚಾರಣೆಗಾಗಿ ಪ್ರಕರಣ ಪಟ್ಟಿ ಮಾಡುವ ಮುನ್ನ ಕಕ್ಷೀದಾರರಿಗೆ ತಮ್ಮ ವಾದ ಪೂರ್ಣಗೊಳಿಸಲು ಸಮಯಾವಕಾಶ ನೀಡಲಾಗುತ್ತದೆ.

ನೋಟಿಸ್‌ ಪ್ರತಿಯನ್ನು ಇಲ್ಲಿ ಓದಿ:

Constitution_Bench_Notice.pdf
Preview