Constitution Bench Supreme Court  
ಸುದ್ದಿಗಳು

'ಎಂಎಸ್ಇಎಫ್‌ಸಿ ಆದೇಶಗಳ ವಿರುದ್ಧದ ರಿಟ್ ಅರ್ಜಿ ನಿರ್ವಹಿಸಬಹುದೇ?' ನಿರ್ಧರಿಸಲಿದೆ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ

ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ವಿಳಂಬವಾಗಿ ಪಾವತಿ ಮಾಡುವ ಸಮಸ್ಯೆ ನಿವಾರಿಸಲು ಎಂಎಸ್ಇಎಫ್‌ಸಿ ಸ್ಥಾಪಿಸಲಾಗಿದೆ. ಈ ಮಂಡಳಿ ಅರೆ-ನ್ಯಾಯಾಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

Bar & Bench

ಅತಿಸಣ್ಣ ಮತ್ತು ಸಣ್ಣ ಉದ್ಯಮಗಳ ಸೌಲಭ್ಯ ಮಂಡಳಿ (ಎಂಎಸ್‌ಇಎಫ್‌ಸಿ) ಜಾರಿಗೊಳಿಸಿದ ಆದೇಶಗಳ ವಿರುದ್ಧ ಸಂವಿಧಾನದ 226ನೇ ವಿಧಿಯಡಿ ಹೈಕೋರ್ಟ್‌ಗಳ ಮುಂದೆ ಸಲ್ಲಿಸಲಾದ ರಿಟ್ ಅರ್ಜಿಗಳನ್ನು ತಾನು ನಿರ್ವಹಿಸಬಹುದೇ ಎಂಬುದನ್ನು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ  ನಿರ್ಧರಿಸಲಿದೆ [ತಮಿಳುನಾಡು ಸಿಮೆಂಟ್ಸ್ ಕಾರ್ಪೊರೇಷನ್ ಮತ್ತು ಎಂಎಸ್‌ಎಂಇ ಸೌಲಭ್ಯ ಮಂಡಳಿ ಇನ್ನಿತರರ ನಡುವಣ ಪ್ರಕರಣ].

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಮನಮೋಹನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.

ರಿಟ್ ಅರ್ಜಿಗಳನ್ನು ನಿರ್ವಹಿಸಬಹುದಾಗಿದ್ದರೆ ಪರ್ಯಾಯ ಪರಿಹಾರಗಳ ಲಭ್ಯತೆಯ ಹೊರತಾಗಿಯೂ ಹೈಕೋರ್ಟ್‌ಗಳು ರಿಟ್ ಅರ್ಜಿಗಳನ್ನು ಯಾವ ಸಂದರ್ಭಗಳಲ್ಲಿ ಪರಿಗಣಿಸಬಹುದು ಎಂಬುದನ್ನು ಸಹ ಸಾಂವಿಧಾನಿಕ ಪೀಠ ನಿರ್ಧರಿಸಲಿದೆ.

ಇದಲ್ಲದೆ, 2006 ರ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಅಭಿವೃದ್ಧಿ (ಎಂಎಸ್‌ಎಂಇಡಿ) ಕಾಯಿದೆಯ ಸೆಕ್ಷನ್ 18ರ ಅಡಿಯಲ್ಲಿ ಸಂಧಾನಕಾರರಾಗಿ ಕಾರ್ಯನಿರ್ವಹಿಸುವ ಎಂಎಸ್‌ಇಎಫ್‌ಸಿ ಸದಸ್ಯರು ಅದೇ ವಿವಾದದಲ್ಲಿ ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸಬಹುದೇ ಎಂಬ ಕುರಿತೂ ನ್ಯಾಯಾಲಯ ವಿಚಾರಣೆ ನಡೆಸಲಿದೆ.

ಈ ಪ್ರಶ್ನೆ ಎಂಎಸ್‌ಎಂಇಡಿ ಕಾಯಿದೆಯ ಸೆಕ್ಷನ್ 18 ಅನ್ನು 1996 ರ ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆಯ ಸೆಕ್ಷನ್ 80ರೊಂದಿಗೆ ಸಮನ್ವಯಗೊಳಿಸುವುದನ್ನು ಒಳಗೊಂಡಿರಲಿದೆ. ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆ ಪಕ್ಷಕಾರರು ಸ್ಪಷ್ಟವಾಗಿ ಒಪ್ಪದ ಹೊರತು ಸಂಧಾನಕಾರರು ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸುವುದನ್ನು ಕಾಯಿದೆ ನಿರ್ಬಂಧಿಸುತ್ತದೆ.

ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ವಿಳಂಬ ಪಾವತಿಗಳಿಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸಲು ಎಂಎಸ್ಎಂಇಡಿ ಕಾಯಿದೆ ಅಡಿಯಲ್ಲಿ ಎಂಎಸ್ಇಎಫ್‌ಸಿಯನ್ನು ಸ್ಥಾಪಿಸಲಾಗಿದೆ. ಈ ಮಂಡಳಿ ವಿವಾದಗಳ ಪರಿಹಾರವನ್ನು ಸುಗಮಗೊಳಿಸುವ ಅರೆ-ನ್ಯಾಯಾಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.