ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್
ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ 
ಸುದ್ದಿಗಳು

ಹೇಬಿಯಸ್ ಕಾರ್ಪಸ್ ಪ್ರಕರಣ 2025ಕ್ಕೆ ಮುಂದೂಡಿದ್ದ ಕರ್ನಾಟಕ ಹೈಕೋರ್ಟ್‌: ಸುಪ್ರೀಂ ತರಾಟೆ

Bar & Bench

ಪೋಷಕರಿಂದ ಅಕ್ರಮವಾಗಿ ಬಂಧನಕ್ಕೊಳಗಾಗಿದ್ದ ಮಹಿಳೆಯ ಪ್ರಿಯಕರ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ನಿರ್ವಹಿಸಿದ ರೀತಿಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಕರಣವನ್ನು ಅನೇಕ ಬಾರಿ ಮುಂದೂಡುವ ಮೂಲಕ ಮಹಿಳೆ ಇನ್ನಷ್ಟು ಕಾಲ ಅಕ್ರಮ ಬಂಧನದಲ್ಲಿರುವಂತೆ ಹೈಕೋರ್ಟ್‌ ನಡೆದುಕೊಂಡಿದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

"ಕರ್ನಾಟಕ ಹೈಕೋರ್ಟ್ ಪ್ರಸ್ತುತ ವಿಷಯವನ್ನು ನಿಭಾಯಿಸಿದ ರೀತಿಗೆ ನಮ್ಮ ಅತೀವ ದುಃಖವನ್ನು ದಾಖಲಿಸಬೇಕಿದೆ. ಬಂಧಿತ ಮಹಿಳೆ ತಾನು ದುಬೈಗೆ ಮರಳಿ ವೃತ್ತಿಜೀವನದಲ್ಲಿ ಮುಂದುವರೆಯಲು ಬಯಸುತ್ತೇನೆ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಸ್ಪಷ್ಟವಾಗಿ ಹೇಳಿರುವಾಗ ಹೈಕೋರ್ಟ್‌ ಆಕೆಯನ್ನು ತಕ್ಷಣವೇ ಬಂಧಮುಕ್ತಗೊಳಿಸುವ ಆದೇಶ ಹೊರಡಿಸಬೇಕಿತ್ತು. ಪ್ರಕರಣವನ್ನು ಹದಿನಾಲ್ಕು ಬಾರಿ ಮುಂದೂಡಿರುವುದಲ್ಲದೆ ಈಗ ಅದನ್ನು ಅನಿರ್ದಿಷ್ಟವಾಗಿ ಮುಂದೂಡಿ 2025ರಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿರುವುದು ಹೈಕೋರ್ಟ್‌ ಸಂವೇದನಾಶೀಲವಾಗಿಲ್ಲ ಎಂಬುದನ್ನು ತೋರಿಸುತ್ತದೆ" ಎಂದು ಸುಪ್ರೀಂ ಕೋರ್ಟ್‌ ವಿವರಿಸಿತು.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ

ಹೈಕೋರ್ಟ್‌ ನಿರ್ಲಕ್ಷ್ಯದಿಂದಾಗಿ ಮಹಿಳೆಯ ಸಂಗಾತಿ ಮತ್ತು ಆತನ ಪೋಷಕರು ಮಹಿಳೆಯ ಯೋಗಕ್ಷೇಮ ವಿಚಾರಿಸಿಕೊಳ್ಳಲು ದುಬೈನಿಂದ ಬೆಂಗಳೂರಿಗೆ ಆಗಾಗ್ಗೆ ಪ್ರಯಾಣಿಸುವಂತಾಯಿತು ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

"ವ್ಯಕ್ತಿಯ ಸ್ವಾತಂತ್ರ್ಯದ ಪ್ರಶ್ನೆ ಎದುರಾದಾಗ ಒಂದು ದಿನದ ವಿಳಂಬವೂ ಲೆಕ್ಕಕ್ಕೆ ಬರುತ್ತದೆ" ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ.

ತನ್ನ ಸಂಗಾತಿಯನ್ನು ಪೋಷಕರ ವಶದಿಂದ ಬಿಡುಗಡೆ ಮಾಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಮಹಿಳೆಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಅದು ಮಹಿಳೆಯ ಪೋಷಕರಿಗೆ ತಾಕೀತು ಮಾಡಿದೆ.

ಅರ್ಜಿದಾರರು ಒಂಬತ್ತು ವರ್ಷಗಳಿಂದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು ಅವರು ದುಬೈನಲ್ಲಿ ಒಟ್ಟಿಗೆ ಅಧ್ಯಯನ ಮಾಡಿದ್ದರು. ಈ ಸಂಬಂಧ ಅರಿತ ಮಹಿಳೆಯ ಪೋಷಕರು ಮಗಳನ್ನು ಬಲವಂತವಾಗಿ ಬೆಂಗಳೂರಿಗೆ ಕರೆತಂದರು. ವಿದೇಶದಲ್ಲಿ ಮಹಿಳೆ ವೃತ್ತಿಜೀವನ ನಡೆಸದಂತೆ ಆಕೆಯ ವೈಯಕ್ತಿಕ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ದೂರಲಾಗಿತ್ತು.

ನಂತರ ಮಹಿಲೆಯ ಸಂಗಾತಿ ಕಳೆದ ವರ್ಷ ಕರ್ನಾಟಕ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದರು. ಈ ಸಂಬಂಧ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೆಪ್ಟೆಂಬರ್ 26, 2023ರಲ್ಲಿ ಹೈಕೋರ್ಟ್‌ ಅಧಿಕಾರಿಗಳಿಗೆ ಸೂಚಿಸಿತ್ತು.

ಮರುದಿನ ಪೊಲೀಸರು ಮಹಿಳೆಯ ಹೇಳಿಕೆ ದಾಖಲಿಸಿಕೊಂಡಿದ್ದರು. ಆಗ ಆಕೆ ತನ್ನ ಅಜ್ಜನ ಅನಾರೋಗ್ಯದ ನೆಪ ಹೇಳಿ ಪೋಕಷರು ತನ್ನನ್ನು ಬಲವಂತವಾಗಿ ಕರೆದೊಯ್ದು ಮದುವೆಗೆ ಒತ್ತಾಯಿಸುತ್ತಿದ್ದಾರೆ ಎಂದು ವಿವರಿಸಿದ್ದರು.

ಸಂವಾದದ ಉದ್ದೇಶದಿಂದ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಹೈಕೋರ್ಟ್‌ ಅಕ್ಟೋಬರ್ 5 ರಂದು ಸೂಚಿಸಿತ್ತಾದರೂ ನಂತರ ಹದಿನಾಲ್ಕು ಬಾರಿ ಪ್ರಕರಣ ಮುಂದೂಡಲಾಯಿತು. ಕಡೆಗೆ ಏಪ್ರಿಲ್ 10, 2025 ರಂದು ವಿಚಾರಣೆ ನಡೆಸಲು ನಿರ್ಧರಿಸಲಾಯಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

25 ವರ್ಷದ ಯುವತಿ, ಆಕೆಯ ಪೋಷಕರು ಮತ್ತು ಮಹಿಳೆಯ ಸಂಗಾತಿಯ ಪೋಷಕರು ನಿನ್ನೆ (ಜನವರಿ 17) ಸುಪ್ರೀಂ ಕೋರ್ಟ್ ಮುಂದೆ ಖುದ್ದಾಗಿ ಹಾಜರಾಗಿದ್ದರು.

ಪ್ರಕರಣದ ಸೂಕ್ಷ್ಮತೆಯನ್ನು ಅರಿತ ನ್ಯಾಯಾಲಯ ಪಕ್ಷಕಾರರೊಂದಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಮಾತುಕತೆ ನಡೆಸಿತು.

ಸಂವಾದದ ಸಮಯದಲ್ಲಿ, ಮಹಿಳೆ ತನ್ನ ಹೆತ್ತವರ ಬಗ್ಗೆ ಎಲ್ಲಾ ಪ್ರೀತಿ, ಗೌರವ ಮತ್ತು ವಾತ್ಸಲ್ಯವನ್ನು ಹೊಂದಿದ್ದರೂ, ದುಬೈಗೆ ಹಿಂತಿರುಗಿ ವೃತ್ತಿಜೀವನ ಮುಂದುವರಿಸಲು ಬಯಸುತ್ತೇನೆ ಎಂದು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು. ಇದಲ್ಲದೆ, ಗೃಹಬಂಧನದಂತಹ ಪರಿಸ್ಥಿತಿಯಿಂದಾಗಿ ಈಗಾಗಲೇ ಮೂರು ಉದ್ಯೋಗಾವಕಾಶ ಕಳೆದುಕೊಂಡಿರುವುದಾಗಿ ತಿಳಿಸಿದರು.

ಆದರೆ ತಾವು ಆಕೆಯ ಇಚ್ಛೆ ಅಥವಾ ವೃತ್ತಿಜೀವನದ ಆಯ್ಕೆಗಳನ್ನು ವಿರೋಧಿಸುವುದಿಲ್ಲ ಬದಲಿಗೆ ಆಕೆ ಆರ್ಥಿಕವಾಗಿ ಸ್ಥಿರವಾಗಿರಬೇಕು ಮತ್ತು ಸುರಕ್ಷಿತವಾಗಿರಬೇಕೆಂದು ಬಯಸುವುದಾಗಿ ಮಹಿಳೆಯ ಪೋಷಕರು ಸ್ಪಷ್ಟಪಡಿಸಿದರು.

ಸರಿ ಮತ್ತು ತಪ್ಪುಗಳನ್ನು ಅರ್ಥಮಾಡಿಕೊಳ್ಳುವಷ್ಟು ಮಹಿಳೆ ಪ್ರಬುದ್ಧಳಾಗಿದ್ದಾಳೆ ಎಂದು ತಿಳಿಸಿದ ಸರ್ವೋಚ್ಚ ನ್ಯಾಯಾಲಯ ಮಹಿಳೆಯನ್ನು ನಿರಂತರ ಬಂಧನದಲ್ಲಿರಿಸುವುದು ಕಾನೂನುಬಾಹಿರ. ಆಕೆಯ ಪಾಸ್‌ಪೋರ್ಟ್‌ ರೀತಿಯ ದಾಖಲೆಗಳನ್ನು ನಲವತ್ತೆಂಟು ಗಂಟೆಗಳ ಒಳಗಾಗಿ ಆಕೆಗೆ ಹಸ್ತಾಂತರಿಸಬೇಕು. ಇದರಿಂದ ಆಕೆ ವಿದೇಶಕ್ಕೆ ತೆರಳಬಹುದು, ಹೀಗಾಗಿ ಆಕೆಯನ್ನು ಅಕ್ರಮ ಬಂಧನದಿಂದ ಬಿಡುಗಡೆ ಮಾಡುವಂತೆ ನ್ಯಾಯಾಲಯ ಪೋಷಕರಿಗೆ ಆದೇಶಿಸಿತು.

ಒಂದು ವೇಳೆ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿದರೆ ಪೋಷಕರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಆದೇಶ ಪಾಲನೆಯಾಗಿದೆಯೇ ಎಂಬುದನ್ನು ಅರಿಯುವುದಕ್ಕಾಗಿ ನ್ಯಾಯಾಲಯ ಪ್ರಕರಣವನ್ನು ಜನವರಿ 22ರಂದು ವಿಚಾರಣೆ ನಡೆಸಲು ನಿರ್ಧರಿಸಿತು.

ಅರ್ಜಿದಾರರನ್ನು ವಕೀಲರಾದ ಎಂ.ಗಿರೀಶ ಕುಮಾರ್, ಅಂಕುರ್ ಎಸ್.ಕುಲಕರ್ಣಿ, ಅಜಿತ್ ಅಂಕಲೇಕರ್, ಶಲಾಕಾ ಶ್ರೀವಾಸ್ತವ, ಪ್ರಿಯಾ ಎಸ್.ಭಲೇರಾವ್ ಮತ್ತು ವರುಣ್ ಕನ್ವಾಲ್ ಪ್ರತಿನಿಧಿಸಿದ್ದರು.

ಮಹಿಳೆಯ ಪೋಷಕರ ಪರವಾಗಿ ಹಿರಿಯ ವಕೀಲ ವಿನಯ್ ನವರೆ, ವಕೀಲರಾದ ಚಾರುದತ್ತ ವಿಜಯರಾವ್ ಮಹೀಂದ್ರಕರ್ ಹಾಗೂ ರುಚಾ ಪ್ರವೀಣ್ ಮಂಡಲಿಕ್ ವಾದ ಮಂಡಿಸಿದ್ದರು.

ಕರ್ನಾಟಕ ಸರ್ಕಾರವನ್ನು ವಕೀಲರಾದ ವಿ.ಎನ್.ರಘುಪತಿ ಮತ್ತು ಮನೇಂದ್ರ ಪಾಲ್ ಗುಪ್ತಾ ಪ್ರತಿನಿಧಿಸಿದ್ದರು.