ಸುಪ್ರೀಂ ಕೋರ್ಟ್, ತೆಲಂಗಾಣ ಹೈಕೋರ್ಟ್
ಸುಪ್ರೀಂ ಕೋರ್ಟ್, ತೆಲಂಗಾಣ ಹೈಕೋರ್ಟ್ 
ಸುದ್ದಿಗಳು

ಗಾಂಜಾದೊಡನೆ ಮೆಣಸಿನಕಾಯಿ ಇದ್ದ ಬಗ್ಗೆ ಪಂಚನಾಮೆ ಮೌನ: ಶಿಕ್ಷೆ ಎತ್ತಿಹಿಡಿದ ತೆಲಂಗಾಣ ಹೈಕೋರ್ಟ್‌ಗೆ ಸುಪ್ರೀಂ ತರಾಟೆ

Bar & Bench

ಮಾದಕ ವಸ್ತು ಪ್ರಕರಣದಲ್ಲಿ ಆರೋಪಿಗಳಿಬ್ಬರನ್ನು ತಪ್ಪಿತಸ್ಥರೆಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಯಾಂತ್ರಿಕವಾಗಿ ಎತ್ತಿಹಿಡಿದಿದ್ದ ತೆಲಂಗಾಣ ಹೈಕೋರ್ಟ್‌ ವಿರುದ್ಧ ಸುಪ್ರೀಂ ಕೋರ್ಟ್‌ ಈಚೆಗೆ ಅಸಮಾಧಾನ ವ್ಯಕ್ತಪಡಿಸಿದೆ [ಮೊಹಮ್ಮದ್‌ ಖಾಲಿದ್‌ ಇನ್ನಿತರರು ಹಾಗೂ ತೆಲಂಗಣ ಸರ್ಕಾರ ನಡುವಣ ಪ್ರಕರಣ].

ಯಾವುದೇ ಪುರಾವೆಗಳಿಲ್ಲದೆ ಕಾನೂನುಬಾಹಿರವಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ನೇರವಾಗಿ ನುಡಿಯಿತು.

"ಆರೋಪಿಗಳ ವಿರುದ್ಧದ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ದಯನೀಯವಾಗಿ ವಿಫಲವಾಗಿದೆ. ಪೊಲೀಸರ ಸಾಕ್ಷ್ಯವು ವಿರೋಧಾಭಾಸಗಳಿಂದ ಕೂಡಿದ್ದು ಸಂಪೂರ್ಣವಾಗಿ ನಂಬಲಾಗುತ್ತಿಲ್ಲ. ವಿಚಾರಣಾ ನ್ಯಾಯಾಲಯ ದಾಖಲಿಸಿದಂತೆ ಮತ್ತು ಹೈಕೋರ್ಟ್ ದೃಢೀಕರಿಸಿದಂತೆ ಆರೋಪಿ ಮೇಲ್ಮನವಿದಾರರಿಗೆ ವಿಧಿಸಲಾದ ಶಿಕ್ಷೆ ಮೇಲ್ನೋಟಕ್ಕೆ ಕಾನೂನುಬಾಹಿರವಾಗಿದ್ದು ಭಾರೀ ಅಸ್ಪಷ್ಟತೆಯಿಂದ ಬಳಲುತ್ತಿದೆ" ಎಂದು ಸುಪ್ರೀಂ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸುವಾಗ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ

ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆಯಡಿ ತಮಗೆ ವಿಧಿಸಲಾಗಿದ್ದ ಶಿಕ್ಷೆ ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ.

ಆರೋಪಿಗಳು 2009ರಲ್ಲಿ ಕಾರಿನಲ್ಲಿ 80 ಕೆಜಿ ಗಾಂಜಾ ಸಾಗಿಸಿದ್ದರು ಎಂದು ಆರೋಪಿಸಲಾಗಿತ್ತು. ವಿಚಾರಣಾ ನ್ಯಾಯಾಲಯ 2010ರಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು, ಇದನ್ನು ಹೈಕೋರ್ಟ್ 2022ರಲ್ಲಿ ಎತ್ತಿಹಿಡಿದಿತ್ತು.

ಆದರೆ, ಶಿಕ್ಷೆ ಎತ್ತಿಹಿಡಿಯುವ ವೇಳೆ ಹೈಕೋರ್ಟ್ ಎಡವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಪೊಲೀಸ್‌ ಅಧಿಕಾರಿಗಳಿಗೆ ಆರೋಪಿಗಳು ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ ಮತ್ತು ವಿಚಾರಣೆ ಟಿಪ್ಪಣಿಗಳನ್ನೇ ಸಾಕ್ಷ್ಯವಾಗಿ ಅವಲಂಬಿಸಿದೆ ಎಂದು ಸರ್ವೋಚ್ಚ ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

ಮಾದಕ ವಸ್ತುಗಳ ದಾಸ್ತಾನನ್ನು ಸರಿಯಾಗಿ ನಿರ್ವಹಿಸಿಲ್ಲ. ವಿಧಿವಿಜ್ಞಾನ ಸಂಸ್ಥೆಯ ಮಾಹಿತಿಯನ್ನೂ ಸರಿಯಾಗಿ ದಾಖಲಿಸಿಕೊಂಡಿಲ್ಲ ಎಂದು ಅದು ಅಸಮಾಧಾನ ವ್ಯಕ್ತಪಡಿಸಿತು.

ಮಾದಕವಸ್ತುವಿನ ತೂಕವನ್ನು ಪರಿಗಣಿಸುವಾಗ ಅದರ ಜೊತೆಗಿದ್ದ ಮೆಣಸಿನಕಾಯಿಗಳನ್ನು ಬೇರ್ಪಡಿಸುವ ಕೆಲಸ ಮಾಡಿಲ್ಲ. ಬದಲಾಗಿ ಗಾಂಜಾದ ಕಟ್ಟುಗಳೊಂದಿಗೆ ಮೆಣಸಿನಕಾಯಿ ಇದ್ದ ಬಗ್ಗೆ ಪಂಚನಾಮೆ ಸಂಪೂರ್ಣ ಮೌನವಾಗಿದೆ. ಹೀಗಾಗಿ ಗಾಂಜಾದ ಒಟ್ಟು ತೂಕ 80 ಕೆಜಿ ಇದೆ ಎಂದು ಖಚಿತವಾಗಿ ಹೇಳಲಾಗದು ಎಂದು ಸುಪ್ರೀಂ ಕೋರ್ಟ್‌ ನುಡಿದಿದೆ.

ಹೀಗಾಗಿ ಮೇಲ್ಮನವಿ ಪುರಸ್ಕರಿಸಿದ ನ್ಯಾಯಾಲಯ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ತೀರ್ಪುಗಳನ್ನು ರದ್ದುಗೊಳಿಸಿತು. ಜೊತೆಗೆ ಆರೋಪಿಗಳನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ, ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Mohammed Khalid and anr vs State of Telangana.pdf
Preview