ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದ 1950ರ ಜನವರಿಯಿಂದ ಈವರೆಗೆ ಒಟ್ಟು 2,183 ಸಾಂವಿಧಾನಿಕ ಪೀಠದ ಪ್ರಕರಣಗಳಲ್ಲಿ ತೀರ್ಪು ನೀಡಲಾಗಿದೆ ಎಂದು ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಶುಕ್ರವಾರ ಸಂಸತ್ತಿಗೆ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ 1960ರಿಂದ 1969ರ ನಡುವಿನ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯ ಅಂದರೆ 956 ಸಾಂವಿಧಾನಿಕ ಪೀಠದ ಪ್ರಕರಣಗಳ ತೀರ್ಪು ಹೊರಬಂದಿತ್ತು ಇಲ್ಲವೇ ಪ್ರಕರಣಗಳ ವಿಲೇವಾರಿಯಾಗಿತ್ತು. ಮತ್ತೊಂದೆಡೆ 2000ರಿಂದ 2009ರ ಅವಧಿಯಲ್ಲಿ ಅತಿ ಕಡಿಮೆ ಸಂಖ್ಯೆಯ ಅಂದರೆ 138 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿದ್ದವು ಎಂದು ಸಚಿವರು ವಿವರಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅಂದರೆ 2020ರಿಂದ 2023ರ ನಡುವೆ ನ್ಯಾಯಾಲಯ ಇಲ್ಲಿಯವರೆಗೆ 19 ಪ್ರಕರಣಗಳನ್ನು ನಿರ್ಧರಿಸಿದೆ. ಕೇರಳದ ಅಲಪ್ಪುಳ ಕ್ಷೇತ್ರದಿಂದ ಲೋಕಸಭೆಯನ್ನು ಪ್ರತಿನಿಧಿಸುತ್ತಿರುವ ಎ ಎಂ ಆರಿಫ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ನಿರ್ಣಯಿಸಲಾದ ಸಂವಿಧಾನಿಕ ಪೀಠದ ಪ್ರಕರಣಗಳ ದಶಕವಾರು ಮಾಹಿತಿ ಈ ರೀತಿ ಇದೆ:
ಸುಪ್ರೀಂ ಕೋರ್ಟ್‌ನಲ್ಲಿ ಜುಲೈ 20, 2023ರವರೆಗೆ 29 ಸಾಂವಿಧಾನಿಕ ಪೀಠದ ಪ್ರಕರಣಗಳು ಬಾಕಿ ಉಳಿದಿವೆ ಎಂದು ಸಚಿವರ ಪ್ರತಿಕ್ರಿಯೆ ತಿಳಿಸಿದೆ.
ಇವುಗಳಲ್ಲಿ 18 ಪ್ರಕರಣಗಳು ಐವರು ನ್ಯಾಯಮೂರ್ತಿಗಳಿರುವ ಪೀಠದ ಮುಂದೆ ಬಾಕಿ ಉಳಿದಿವೆ, 6 ಪ್ರಕರಣಗಳು ಏಳು ಮಂದಿ ನ್ಯಾಯಮೂರ್ತಿಗಳ ಪೀಠದ ಮುಂದೆ ಮತ್ತು 5 ಪ್ರಕರಣಗಳು ಒಂಬತ್ತು ಮಂದಿ ನ್ಯಾಯಮೂರ್ತಿಗಳ ಪೀಠದೆದುರು ಬಾಕಿ ಇವೆ ಎಂದು ಸಚಿವರು ಉತ್ತರಿಸಿದ್ದಾರೆ.
ಅಭಿರಾಮ್ ಸಿಂಗ್ ಮತ್ತು (ಮೃತ) ಸಿ ಎಸ್ ಕಮಾಚೆನ್ ನಡುವಣ ಪ್ರಕರಣವು ಬಾಕಿ ಉಳಿದಿರುವ ಹಳೆಯ ಸಾಂವಿಧಾನಿಕ ಪೀಠದ ಪ್ರಕರಣವಾಗಿದೆ. ಇದನ್ನು 31 ವರ್ಷಗಳ ಹಿಂದೆ ಅಂದರೆ 1992ರಲ್ಲಿ ಹೂಡಲಾಗಿತ್ತು.
ಆದರೆ, ಸಚಿವರು ಪ್ರಸ್ತಾಪಿಸಿದ ಅಂಕಿಅಂಶಗಳು ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಒದಗಿಸಲಾದ ವಿವರಗಳಿಗಿಂತ ಭಿನ್ನವಾಗಿವೆ.
ಜಾಲತಾಣದ ಪ್ರಕಾರ, ಜುಲೈ 1, 2023ರಂತೆ ಸುಪ್ರೀಂ ಕೋರ್ಟ್‌ನಲ್ಲಿ 44 ಸಾಂವಿಧಾನಿಕ ಪೀಠದ ಪ್ರಕರಣಗಳು ಬಾಕಿ ಉಳಿದಿವೆ. ಇವುಗಳಲ್ಲಿ 33 ಪ್ರಕರಣಗಳು ಐವರು ನ್ಯಾಯಮೂರ್ತಿಗಳ ಪೀಠದಲ್ಲಿ, 6 ಪ್ರಕರಣಗಳು ಏಳು ನ್ಯಾಯಮೂರ್ತಿಗಳ ಪೀಠದೆದುರು ಹಾಗೂ 5 ಪ್ರಕರಣಗಳು ಒಂಬತ್ತು ನ್ಯಾಯಮೂರ್ತಿಗಳ ಪೀಠದ ಮುಂದೆ ಬಾಕಿ ಉಳಿದಿವೆ.
[ಪ್ರಶ್ನೋತ್ತರದ ವಿವರಗಳನ್ನು ಇಲ್ಲಿ ಓದಿ]