Supreme Court of India 
ಸುದ್ದಿಗಳು

ವಿವಾಹಿತ ಪುರುಷರ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪುರುಷ ಆಯೋಗ ರಚನೆಗೆ ಮನವಿ: ಪಿಐಎಲ್ ತಿರಸ್ಕರಿಸಿದ ಸುಪ್ರೀಂ

ಅರ್ಜಿ ಕೇವಲ ಒಂದು ಕಡೆಯ ಚಿತ್ರಣವನ್ನಷ್ಟೇ ನೀಡುತ್ತದೆ ಎಂದಿರುವ ನ್ಯಾಯಾಲಯ ಅಂತಹ ಸನ್ನಿವೇಶಗಳನ್ನು ಕ್ರಿಮಿನಲ್ ಕಾನೂನು ನಿಭಾಯಿಸಲಿದ್ದು ಜನರು ಪರಿಹಾರರಹಿತವಾಗಿ ಉಳಿಯುವುದಿಲ್ಲ ಎಂದು ಬುದ್ಧಿಮಾತು ಹೇಳಿದೆ.

Bar & Bench

ವಿವಾಹಿತ ಪುರುಷರ ಆತ್ಮಹತ್ಯೆ ಪ್ರಕರಣಗಳನ್ನು ಪರಿಶೀಲಿಸುವುದಕ್ಕಾಗಿ ರಾಷ್ಟ್ರೀಯ ಪುರುಷರ ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ಅರ್ಜಿ ಏಕಪಕ್ಷೀಯ ಚಿತ್ರಣವನ್ನಷ್ಟೇ ಒಳಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.  

“ಯಾರ ಬಗ್ಗೆಯೂ ಸುಳ್ಳೇ ಸಹಾನುಭೂತಿ ತೋರುವ ಪ್ರಶ್ನೆ ಇಲ್ಲ. ನೀವು (ಅರ್ಜಿದಾರರು) ಕೇವಲ ಒಂದು ಕಡೆಯ ಚಿತ್ರಣ ನೀಡಲು ಬಯಸಿದ್ದು ಮದುವೆಯಾದ ಕೂಡಲೇ ಸಾಯುತ್ತಿರುವ ಯುವತಿಯರ ಮಾಹಿತಿಯನ್ನು ನೀವು ನಮಗೆ ನೀಡುವಿರೆ?” ಎಂದು ಪೀಠ ಪ್ರಶ್ನಿಸಿತು.

ಅಂತಹ ಸನ್ನಿವೇಶಗಳನ್ನು ಕ್ರಿಮಿನಲ್‌ ಕಾನೂನು ನಿಭಾಯಿಸಲಿದ್ದು ಜನರು ಪರಿಹಾರರಹಿತವಾಗಿ ಉಳಿಯುವುದಿಲ್ಲ ಎಂದು ಬುದ್ಧಿಮಾತು ಹೇಳಿದೆ. "ಯಾರೂ ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದಿಲ್ಲ, ಇದು ವೈಯಕ್ತಿಕ ಪ್ರಕರಣದ ವಾಸ್ತವಾಂಶಗಳನ್ನು ಅವಲಂಬಿಸಿರುತ್ತದೆ. ಕ್ರಿಮಿನಲ್ ಕಾನೂನು ಕಾಳಜಿ ವಹಿಸುತ್ತದೆ, ಅದು ಪರಿಹಾರರಹಿತವಾಗಿ ಇರಿಸುವುದಿಲ್ಲ" ಎಂದು ಅದು ಹೇಳಿದೆ.

ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗಿ ಆತ್ಮಹತ್ಯೆ ಕುರಿತು ಆಲೋಚಿಸುವ ವಿವಾಹಿತ ಪುರುಷರ ನೆರವಿಗಾಗಿ ಮಾರ್ಗಸೂಚಿ ರೂಪಿಸುವಂತೆ ಅರ್ಜಿದಾರರಾದ ವಕೀಲ ಮಹೇಶ್ ಕುಮಾರ್ ತಿವಾರಿ ಅವರು ಕೋರಿದ್ದರು. ರಾಷ್ಟ್ರೀಯ ಪುರುಷರ ಆಯೋಗ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದ ಅವರು ವಿವಾಹಿತ ಪುರುಷರ ಆತ್ಮಹತ್ಯೆ ಮತ್ತು ಕೌಟುಂಬಿಕ ಹಿಂಸಾಚಾರದ ಬಗ್ಗೆ ಪರಿಶೀಲಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶನ ನೀಡಬೇಕು. ಸಮಸ್ಯೆ ಅಧ್ಯಯನ ಮಾಡಿ ಪುರುಷರ ಆಯೋಗ ರಚನೆಗಾಗಿ ಭಾರತೀಯ ಕಾನೂನು ಆಯೋಗ ವರದಿ ಸಿದ್ಧಪಡಿಸಬೇಕು. ಜೊತೆಗೆ ಪುರುಷರು ಸಲ್ಲಿಸುವ ದೂರುಗಳನ್ನು ಪೊಲೀಸರು ಸ್ವೀಕರಿಸಿ ಕಾನೂನು ರೂಪುಗೊಳ್ಳುವವರೆಗೆ ಅದನ್ನು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕಳುಹಿಸಬೇಕು ಎಂದು ಅವರು ವಿನಂತಿಸಿದ್ದರು.

ವಿವಾಹಿತ ಪುರುಷರಲ್ಲಿ ಮದುವೆಯ ಒತ್ತಡದಿಂದ ಉಂಟಾಗುವ ಆತ್ಮಹತ್ಯೆಯ ಘಟನೆಗಳನ್ನು ವಿವರಿಸುವುದಕ್ಕಾಗಿ ಅವರು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ನೀಡುವ ಮಾಹಿತಿಯನ್ನು ಅವಲಂಬಿಸಿದ್ದರು.