ತನಗೆ ಪರವಾನಗಿ ನೀಡಲು ಮಹಾರಾಷ್ಟ್ರ ಸರ್ಕಾರ ನಿರಾಕರಿಸಿದ್ದನ್ನು ಪ್ರಶ್ನಿಸಿ ದ್ವಿಚಕ್ರ ವಾಹನ ಟ್ಯಾಕ್ಸಿ ಅಗ್ರಿಗೇಟರ್ ಕಂಪೆನಿಯಾದ ರ‍್ಯಾಪಿಡೊ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ಅಸಮ್ಮತಿ ಸೂಚಿಸಿದೆ [ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಲಿಮಿಟೆಡ್ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
2019ರಲ್ಲಿ ಮೋಟಾರು ವಾಹನ ಕಾಯಿದೆಗೆ ಮಾಡಲಾದ ತಿದ್ದಪಡಿ ಪ್ರಕಾರ ಸೂಕ್ತ ಪರವಾನಗಿ ಇಲ್ಲದೆ ಅಗ್ರಿಗೇಟರ್‌ಗಳು ಕಾರ್ಯನಿರ್ವಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂಯರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಹೇಳಿತು.
ಪರವಾನಗಿಗಾಗಿ ರ‍್ಯಾಪಿಡೊ ಮಾಡಿದ್ದ ಮನವಿಯನ್ನು ಡಿಸೆಂಬರ್ 2022ರಲ್ಲಿ ಪುಣೆ ಆರ್‌ಟಿಒ ತಿರಸ್ಕರಿಸಿತ್ತು. ಈ ಕುರಿತ ಅರ್ಜಿಯ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರದಲ್ಲಿ ಬೈಕ್ ಟ್ಯಾಕ್ಸಿಗಳ ಪರವಾನಗಿಗೆ ಸಂಬಂಧಿಸಿದಂತೆ ನೀತಿ ಇಲ್ಲದೇ ಇರುವುದನ್ನು ಪ್ರಸ್ತಾಪಿಸಿತ್ತು. ಬಳಿಕ ಸರ್ಕಾರ ಇದನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿತ್ತು. ಸರ್ಕಾರ ಜನವರಿ 19ರಂದು ಅಗ್ರಿಗೇಷನ್ (ನಿರ್ದಿಷ್ಟ ಸೇವೆಯನ್ನು ಒದಗಿಸುವವರನ್ನು ಗ್ರಾಹಕರೊಂದಿಗೆ ಜೋಡಿಸುವ ಉದ್ದೇಶದಿಂದ ರೂಪಿಸಲಾದ ವೆಬ್‌ತಾಣ ಅಥವಾ ಅಪ್ಲಿಕೇಷನ್ - ಪ್ರಸಕ್ತ ಪ್ರಕರಣದಲ್ಲಿ ಬೈಕ್ ಟ್ಯಾಕ್ಸಿ ಸೇವೆ) ಉದ್ದೇಶಕ್ಕಾಗಿ ಸಾರಿಗೇಯೇತರ ವಾಹನ ಬಳಕೆ ನಿಷೇಧಿಸುವ ಅಧಿಸೂಚನೆ ಹೊರಡಿಸಿತ್ತು.
ಪುಣೆ ಆರ್‌ಟಿಒ ಆದೇಶದ ನಿಖರತೆಯು ಸಮಸ್ಯೆಯನ್ನು ಪರಿಶೀಲಿಸುವ ಸಮಿತಿ ರಚಿಸಿದ ರಾಜ್ಯ ಸರ್ಕಾರದ ವಿಸ್ತೃತ ನಿರ್ಧಾರದಲ್ಲೇ ಅಡಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ರ‍್ಯಾಪಿಡೊಗೆ ಪರಿಹಾರ ನೀಡಲು ಅದು ನಿರಾಕರಿಸಿತು. ಆದರೆ ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಜನವರಿ 19ರ ಅಧಿಸೂಚನೆ ಪ್ರಶ್ನಿಸಲು ಸಂವಿಧಾನದ 226ನೇ ವಿಧಿಯಡಿ ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಕಂಪನಿಗೆ ಸ್ವಾತಂತ್ರ್ಯ ನೀಡಿತು.