PM Narendra Modi, Supreme Court 
ಸುದ್ದಿಗಳು

ಪಿಎಂ ಕೇರ್ಸ್‌ ನಿಧಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಆಲಿಸಲು ನಿರಾಕರಿಸಿದ ಸುಪ್ರೀಂ; ಹೈಕೋರ್ಟ್‌ಗೆ ಎಡತಾಕಲು ಸೂಚನೆ

ವಿಪತ್ತು ನಿರ್ವಹಣಾ ಕಾಯಿದೆ ಇರುವಾಗಲೇ ಪಿಎಂ ಕೇರ್ಸ್‌ ನಿಧಿ ಹಾಗೂ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯನ್ನು ಸ್ಥಾಪಿಸಿರುವ ಸಿಂಧುತ್ವವನ್ನು ಪ್ರಶ್ನಿಸಿ ದಾಖಲಿಸಲಾಗಿದ್ದ ಪಿಐಎಲ್‌ಅನ್ನು ಅಲಾಹಾಬಾದ್‌ ಹೈಕೋರ್ಟ್‌ ವಜಾಗೊಳಿಸಿತ್ತು.

Bar & Bench

ಪಿಎಂ ಕೇರ್ಸ್‌ ನಿಧಿಯ ಕಾನೂನುಬದ್ಧತೆಯನ್ನು ಎತ್ತಿ ಹಿಡಿದಿರುವ ಅಲಾಹಾಬಾದ್‌ ಹೈಕೋರ್ಟ್‌ನ ತೀರ್ಪನ್ನು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ [ದಿವ್ಯಪಾಲ್‌ ಸಿಂಗ್‌ ವರ್ಸಸ್ ಭಾರತ ಸರ್ಕಾರ].

ಮನವಿಯನ್ನು ಹಿಂಪಡೆದು ಅಲಾಹಾಬಾದ್‌ ಹೈಕೋರ್ಟ್‌ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಅರ್ಜಿದಾರರ ಪರ ವಕೀಲ ದೇವದತ್‌ ಕಾಮತ್‌ ಅವರಿಗೆ ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರರಾವ್‌ ಹಾಗೂ ಬಿ ಆರ್‌ ಗವಾಯಿ ಅವರಿದ್ದ ಪೀಠವು ಅನುಮತಿಸಿತು.

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ ಪ್ರಕರಣವನ್ನು ದಾಖಲಿಸಲು ಇರುವ ಕಾನೂನಾತ್ಮಕ ಅಧಿಕಾರದ (ಲೋಕಸ್‌ ಸ್ಟ್ಯಾಂಡಿ) ಬಗ್ಗೆ ಪ್ರಶ್ನಿಸಿತು. ಅದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಕಾಮತ್‌ ಅವರು, "ಅರ್ಜಿದಾರರು ಓರ್ವ ಕಳಕಳಿಯುಳ್ಳ ನಾಗರಿಕರಾಗಿದ್ದು ಯಾವುದೇ ದುರುದ್ದೇಶ ಹೊಂದಿಲ್ಲ. ಪ್ರಧಾನ ಮಂತ್ರಿ ಹುದ್ದೆ ಸಾಂವಿಧಾನಿಕ ನಿಯೋಜಿತವಾದುದು" ಎಂದರು. ಆಗ ಪೀಠವು, "ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿ (ಹೈಕೋರ್ಟ್‌ನಲ್ಲಿ)" ಎಂದಿತು.

ವಿಪತ್ತು ನಿರ್ವಹಣಾ ಕಾಯಿದೆ ಇರುವಾಗಲೇ ಪಿಎಂ ಕೇರ್ಸ್‌ ನಿಧಿ ಹಾಗೂ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯನ್ನು ಸ್ಥಾಪಿಸಿರುವ ಸಿಂಧುತ್ವವನ್ನು ಪ್ರಶ್ನಿಸಿ ದಾಖಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ವಜಾಗೊಳಿಸಿತ್ತು. ಇದರ ವಿರುದ್ಧ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಪಿಎಂ ಕೇರ್ಸ್‌ ನಿಧಿಯನ್ನು ಯಾವುದೇ ಸೂಕ್ತ ಕಾನೂನಿನ ಬೆಂಬಲವಿಲ್ಲದೆ ಸೃಷ್ಟಿಸಲಾಗಿದೆ. ಅಲ್ಲದೆ, ಅದನ್ನು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಪಿಎಂ ಕೇರ್ಸ್‌ ನಿಧಿಯು ವಿಪತ್ತು ನಿರ್ವಹಣಾ ಕಾಯಿದೆಯನ್ನು ದುರ್ಬಲಗೊಳಿಸುತ್ತದೆ ಎನ್ನುವುದು ಅರ್ಜಿದಾರರ ವಾದವಾಗಿದೆ.

ಪಿಎಂ ಕೇರ್ಸ್‌ ನಿಧಿಯ ಪೂರ್ಣ ಮಾಹಿತಿಯನ್ನು, ಖರ್ಚುವೆಚ್ಚಗಳನ್ನು, ಕಾರ್ಯಚಟುವಟಿಕೆಗಳನ್ನು ನ್ಯಾಯಾಲಯಕ್ಕೆ ಹಾಗೂ ಸಾರ್ವಜನಿಕರಿಗೆ ತಿಳಿಸಬೇಕು. ಇದಕ್ಕಾಗಿ ಅಂತರ್ಜಾಲ ತಾಣದಲ್ಲಿ ಈ ಕುರಿತ ಮಾಹಿತಿಯನ್ನು ನೀಡುವಂತೆ ಹಾಗೂ ಕಾಲಕಾಲಕ್ಕೆ ಮಾಹಿತಿಯನ್ನು ಪರಿಷ್ಕರಿಸುವಂತೆ ಏಕಪಕ್ಷೀಯವಾಗಿ ನ್ಯಾಯಾಲಯವು ಮಧ್ಯಂತರ ಆದೇಶವನ್ನು ನೀಡಬೇಕು ಎನ್ನುವುದು ಅರ್ಜಿದಾರರ ಕೋರಿಕೆಯಾಗಿತ್ತು. ಮುಂದುವರೆದು, ಇತರೆ ನಿಧಿಗಳ ರೀತಿಯಲ್ಲಿಯೇ ಇದನ್ನೂ ಸಹ ಭಾರತೀಯ ಮಹಾಲೇಖಪಾಲರಿಂದ ಲೆಕ್ಕ ಪರಿಶೋದನೆ ನಡೆಸಿ ಲೆಕ್ಕಪರಿಶೋಧನಾ ವರದಿಯನ್ನು ಪ್ರಕಟಿಸುವಂತೆ ಅರ್ಜಿದಾರರು ಕೋರಿದ್ದರು.