Supreme Court with Asaduddin Owaisi, AIMIMfacebook  
ಸುದ್ದಿಗಳು

ಓವೈಸಿ ಪಕ್ಷದ ನೋಂದಣಿ ರದ್ದತಿ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ರಾಜಕೀಯ ಪಕ್ಷಗಳು ಕೋಮು ಹೇಳಿಕೆ ನೀಡುವ ವಿಸ್ತೃತ ವಿಚಾರವಾಗಿ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠ ಮನವಿದಾರರಿಗೆ ಸೂಚಿಸಿತು.

Bar & Bench

ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ರಾಜಕೀಯ ಪಕ್ಷ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸಲಿಮೀನ್‌ನ (ಎಐಎಂಐಎಂ) ನೋಂದಣಿ ರದ್ದುಗೊಳಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ರಾಜಕೀಯ ಪಕ್ಷಗಳು ಕೋಮು ಹೇಳಿಕೆ ನೀಡುವ ವಿಸ್ತೃತ ವಿಚಾರವಾಗಿ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠ ಮನವಿದಾರರಿಗೆ ಸೂಚಿಸಿತು.

"ನಾವು ಕೋಮು ಪಕ್ಷ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿಲ್ಲ. ಕೆಲವೊಮ್ಮೆ ಪ್ರಾದೇಶಿಕ ಪಕ್ಷಗಳು ಪ್ರಾದೇಶಿಕ ಭಾವನೆಗಳನ್ನು ಪ್ರಚೋದಿಸುತ್ತವೆ... ಹಾಗಾದರೆ ಏನು ಮಾಡಬೇಕು... ಜಾತಿ ಸಮಸ್ಯೆಗಳನ್ನು ಮುಂದುಮಾಡುವ ಪಕ್ಷಗಳಿದ್ದು, ಅದು ಸಹ ಅಷ್ಟೇ ಅಪಾಯಕಾರಿ. ಯಾರನ್ನೂ ಟೀಕಿಸದೆ, ಅಂತಹ ವಿಚಾರಗಳನ್ನು ಎತ್ತಬಹುದಾಗಿದೆ " ಎಂದು ನ್ಯಾಯಾಲಯ ಹೇಳಿದೆ.

ನಂತರ ವಿವಿಧ ನೆಲೆಯಲ್ಲಿ ರಾಜಕೀಯ ಪಕ್ಷಗಳ ವ್ಯವಹಾರಗಳಲ್ಲಿ ಸುಧಾರಣೆ ಕೋರುವ ವಿಸ್ತೃತ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯದೊಂದಿಗೆ ಅರ್ಜಿದಾರರು ದಾವೆ ಹಿಂಪಡೆದರು.

ಎಐಎಂಐಎಂ ಪಕ್ಷವನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್‌ ಆದೇಶದ ವಿರುದ್ಧ ಶಿವಸೇನೆಯ ತೆಲಂಗಾಣ ಘಟಕದ ಅಧ್ಯಕ್ಷ ತಿರುಪತಿ ನರಸಿಂಹ ಮುರಾರಿ ಅವರು ಅರ್ಜಿ ಸಲ್ಲಿಸಿದ್ದರು.

ಮುಸ್ಲಿಮರ ಹಿತಾಸಕ್ತಿಯ ವಿಷಯಗಳಿಗಷ್ಟೇ ಎಂಐಎಂ ಪಕ್ಷದ ಸಂವಿಧಾನವು ಸೀಮಿತವಾಗಿದ್ದು ಜಾತ್ಯತೀತ ತತ್ವಗಳ ವಿರುದ್ಧದ ಬಂಡುಕೋರತನದಿಂದ ಕೂಡಿದೆ. ಇದು 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 29 ಎ ನಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಈಡೇರಿಸುವುದಿಲ್ಲ ಎಂದು ಮುರಾರಿ ಹೈಕೋರ್ಟ್‌ನಲ್ಲಿ ವಾದಿಸಿದ್ದರು.  

ಅರ್ಜಿದಾರರು ಕೋರಿರುವ ಪರಿಹಾರ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿ ಮೀರಿದೆ ಎಂದು 2024ರಲ್ಲಿ ಹೈಕೋರ್ಟ್‌ಏಕ ಸದಸ್ಯ ಪೀಠ  ತೀರ್ಪು ನೀಡಿತ್ತು. ಇದನ್ನು ವಿಭಾಗೀಯ ಪೀಠ ಕಳೆದ ಜನವರಿಯಲಿ ಎತ್ತಿ ಹಿಡಿದಿತ್ತು. ಹಾಗಾಗಿ ಮುರಾರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಮುರಾರಿ ಪರ ಹಾಜರಾದ ವಕೀಲ ವಿಷ್ಣು ಶಂಕರ್ ಜೈನ್, ಒಂದು ರಾಜಕೀಯ ಪಕ್ಷವು ಧರ್ಮದ ಹೆಸರಿನಲ್ಲಿ ಮತ ಕೇಳುವಂತಿಲ್ಲ ಎಂದು ವಾದಿಸಿದರು.

ಈ ಹಂತದಲ್ಲಿ ಅಲ್ಪಸಂಖ್ಯಾತರಿಗೆ ಸಂವಿಧಾನ ಕೆಲವು ಹಕ್ಕುಗಳನ್ನು ನೀಡಿದೆ ಎಂದು ಗಮನಸೆಳೆದ ನ್ಯಾಯಮೂರ್ತಿ ಸೂರ್ಯ ಕಾಂತ್ ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವುದನ್ನು ಪಕ್ಷದ  ಸಂವಿಧಾನ ಹೇಳುತ್ತಿದೆ ಎಂದರು.

ರಾಜಕೀಯ ಪಕ್ಷವೊಂದು ಧರ್ಮದ ಹೆಸರಿನಲ್ಲಿ ಮತ ಯಾಚಿಸುವಂತಿಲ್ಲ ಎಂಬ ತೀರ್ಪನ್ನು ಅರ್ಜಿದಾರರು ಉಲ್ಲೇಖಿಸಿದರು. ಆದರೆ ಈ ತೀರ್ಪು ಕೋಮು ಭಾವನೆ ಕೆರಳಿಸುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಹೇಳಿತು. ಅಂತೆಯೇ ಯಾರೊಬ್ಬರ ವಿರುದ್ಧವೂ ಆರೋಪ ಇರದ ತಟಸ್ಥ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಮನವಿ ಹಿಂಪಡೆದರು.