Justice Ahsanuddin Amanullah, Justice Aniruddha Bose and Justice Augustine George Masih 
ಸುದ್ದಿಗಳು

ಮುಖ್ಯ ನ್ಯಾಯಮೂರ್ತಿಗಳ ನಕಲಿ ವಾಟ್ಸಪ್‌ ಖಾತೆ ಸೃಷ್ಟಿ: ಐಪಿಎಸ್ ಅಧಿಕಾರಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

Bar & Bench

ಅನಗತ್ಯ ಪ್ರಯೋಜನ ಪಡೆಯುವುದಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಾಟ್ನಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂಜಯ್‌ ಕರೋಲ್‌ (ಈಗ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ) ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿದ್ದರು ಎಂಬ ಆರೋಪವನ್ನು ಸುಪ್ರೀಂ ಕೋರ್ಟ್ಈಚೆಗೆ ಗಂಭೀರವಾಗಿ ಪರಿಗಣಿಸಿದೆ [ಆದಿತ್ಯ ಕುಮಾರ್ ಮತ್ತು ಬಿಹಾರ ಹಾಗೂ ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ತಮಗೆ ಬೇಕಾದ ತೀರ್ಪು ಪಡೆಯುವುದಕ್ಕಾಗಿ ನಿರ್ದಿಷ್ಟ ನ್ಯಾಯಮೂರ್ತಿಗಳ ಮುಂದೆ ಪ್ರಕರಣವನ್ನು ಪಟ್ಟಿ ಮಾಡಲು (ಫೋರಂ ಶಾಪಿಂಗ್‌) ಪೊಲೀಸ್‌ ಅಧಿಕಾರಿಗೆ ಸಹಾಯ ಮಾಡಲು ಈ ಪ್ರಕರಣದಲ್ಲಿ ಇಬ್ಬರು ನ್ಯಾಯಾಂಗ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು.

ಆಗ ಇಂತಹ ದೊಡ್ಡ ಪ್ರಕರಣವನ್ನು ಪರಿಗಣಿಸದೆ ಬಿಡಲಾಗದು ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಅಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ಪೀಠ ಐಪಿಎಸ್ ಅಧಿಕಾರಿ ಆದಿತ್ಯ ಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.

ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಪರಿಶುದ್ಧತೆ ಕಾಪಾಡಿಕೊಳ್ಳುವುದಷ್ಟೇ ಅಲ್ಲ ವ್ಯವಸ್ಥೆಯ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸವನ್ನು ಎತ್ತಿಹಿಡಿಯಬೇಕಿರುವುದರಿಂದ ದೊರೆತಿರುವ ಸಾಕ್ಷ್ಯಗಳ ಬಗ್ಗೆ ನ್ಯಾಯಾಲಯ ಖಂಡಿತವಾಗಿಯೂ ಕಣ್ಣುಮುಚ್ಚಿ ಕೂರುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಈ ಹಿಂದೆ, ಪಾಟ್ನಾ ಹೈಕೋರ್ಟ್, ಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇಬ್ಬರು ನ್ಯಾಯಾಧೀಶರ ವಿರುದ್ಧದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿದ್ದ ಪೀಠಕ್ಕೆ ವರ್ಗಾಯಿಸಿತ್ತು. ಇದೀಗ ಅವರಿಬ್ಬರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಪಾಟ್ನಾ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.

ಅಲ್ಲದೆ ಮುಂದಿನ ವಿಚಾರಣೆಯ ದಿನವಾದ ಡಿಸೆಂಬರ್ 12ರಂದು ಸಂಬಂಧಿತ ಕ್ರಿಮಿನಲ್ ಪ್ರಕರಣದ ಸಂಪೂರ್ಣ ಕೇಸ್ ಡೈರಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಬಿಹಾರ ಪೊಲೀಸರ ಆರ್ಥಿಕ ಕಚೇರಿ ಘಟಕಕ್ಕೆ (ಇಒಡಬ್ಲ್ಯೂ) ಸುಪ್ರೀಂ ಕೋರ್ಟ್‌ ಆದೇಶಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Aditya Kumar v. The State of Bihar & Anr.pdf
Preview