Supreme Court of India 
ಸುದ್ದಿಗಳು

ಜಾಮೀನು ಆದೇಶಗಳಲ್ಲಿ ಸಾಕ್ಷ್ಯಗಳ ವಿವರವಾದ ವಿಶದೀಕರಣಕ್ಕೆ ಸುಪ್ರೀಂ ಕೋರ್ಟ್ ಮತ್ತೆ ಅಸಮ್ಮತಿ

ಈ ಹಿಂದೆ ಮೇ 10 ರಂದು ಹೊರಡಿಸಿದ ಆದೇಶದಲ್ಲಿ, ಪೀಠವು ಶಿವಸೇನಾ ನಾಯಕ ರಾಹುಲ್ ಶೆಟ್ಟಿ ಹತ್ಯೆಯ ಆರೋಪಿ ಖಾದರ್ ಇನಾಮ್‌ದಾರ್ ಎಂಬ ವ್ಯಕ್ತಿಗೆ ಜಾಮೀನು ನೀಡುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.

Bar & Bench

ಜಾಮೀನು ಆದೇಶಗಳು ದೀರ್ಘವಾಗಿರಬಾರದು ಮತ್ತು ಸಾಕ್ಷ್ಯಾಧಾರಗಳ ವಿವರವಾದ ಪರಿಶೀಲನೆ ಇಲ್ಲದೆಯೇ ತ್ವರಿತವಾಗಿ ಅಂತಹ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪುನರುಚ್ಚರಿಸಿದೆ [ಖಾದರ್‌ ನಜೀರ್ ಇನಾಮದಾರ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಮೇ 10 ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ಶಿವಸೇನಾ ನಾಯಕ ರಾಹುಲ್ ಶೆಟ್ಟಿ ಹತ್ಯೆಯ ಆರೋಪಿ ಖಾದರ್ ಇನಾಮ್‌ದಾರ್ ಎಂಬ ವ್ಯಕ್ತಿಗೆ ಜಾಮೀನು ನೀಡುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಕಳೆದ ತಿಂಗಳು ತಾನು ನೀಡಿದ್ದ ಇದೇ ಬಗೆಯ ಆದೇಶವನ್ನು ಈ ಸಂದರ್ಭದಲ್ಲಿ ನ್ಯಾಯಾಲಯ ಪ್ರಸ್ತಾಪಿಸಿತು. ಆಗ ʼಜಾಮೀನು ಆದೇಶಗಳನ್ನು ನೀಡುವಾಗ ಸಾಕ್ಷ್ಯವನ್ನು ವಿವರವಾಗಿ ತಿಳಿಸುವ ಪರಿಪಾಠಕ್ಕೆ ಅದು ಅಸಮ್ಮತಿ ವ್ಯಕ್ತಪಡಿಸಿತ್ತು. ಜಾಮೀನು ಆದೇಶಗಳು ದೀರ್ಘವಾಗಿರಬಾರದು ಮತ್ತು ಸಕಾಲಿಕವಾಗಿ ಅವು ಹೊರಬರುವಂತೆ ನೋಡಿಕೊಳ್ಳಬೇಕುʼ ಎಂದು ದೇಶದ ಎಲ್ಲಾ ನ್ಯಾಯಾಲಯಗಳಿಗೆ ಅದು ಸೂಚಿಸಿತ್ತು.

"ಈ ನ್ಯಾಯಾಲಯ  ಏಪ್ರಿಲ್ 27, 2023ರಂದು ಹೊರಡಿಸಿದ್ದ ಆದೇಶದ ಪ್ರಕಾರ ಜಾಮೀನು / ನಿರೀಕ್ಷಣಾ ಜಾಮೀನು ನೀಡುವ / ತಿರಸ್ಕರಿಸುವ ಆದೇಶಗಳಲ್ಲಿ ಸಾಕ್ಷ್ಯಗಳ ವಿವರವಾದ ವಿಶದೀಕರಣದ ಪರಿಪಾಠಕ್ಕೆ ಅಸಮ್ಮತಿ ಸೂಚಿಸಲಾಗಿತ್ತು. ಈ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದ ಮತ್ತು ತೀರ್ಪು ಪ್ರಕಟಿಸಿದ ದಿನದ ನಡುವೆ ದೀರ್ಘ ವಿಳಂಬ ಮಾಡುವುದಕ್ಕೂ ಅಸಮ್ಮತಿ ಸೂಚಿಸಿತ್ತು. ನಾಗರಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ, ನ್ಯಾಯಾಲಯಗಳು ತ್ವರಿತವಾಗಿ ಪ್ರಕರಣಗಳನ್ನು ನಿರ್ಧರಿಸಬೇಕು ಎಂಬ ನಿರೀಕ್ಷೆಯಿದೆ ಎಂದು ಹೇಳುತ್ತಿದ್ದೇವೆ" ಎಂಬುದಾಗಿ ಪೀಠ ತಿಳಿಸಿತು.

ಹಿನ್ನೆಲೆ: ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಸೆಪ್ಟೆಂಬರ್ 29ರ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಇನಾಮ್‌ದಾರ್ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಪೀಠದಲ್ಲಿ ನಡೆಯಿತು. ಇನಾಮ್‌ದಾರ್‌ಗೆ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್ ಆದೇಶ 16 ಪುಟಗಳಿಂದ ಕೂಡಿದ್ದು ತೀರ್ಪನ್ನು ಕಾಯ್ದಿರಿಸಿದ ಸುಮಾರು ಮೂರು ತಿಂಗಳ ನಂತರ ಅದನ್ನು ನೀಡಲಾಗಿದೆ ಎಂಬ ಅಂಶವನ್ನು ಗಮನಿಸಿದ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Kadar_Nazir_Inamdar_vs_State_of_Maharashtra.pdf
Preview