ಚುನಾವಣಾ ಬಾಂಡ್ಗಳು  
ಸುದ್ದಿಗಳು

ಚುನಾವಣಾ ಬಾಂಡ್‌: ಎಸ್‌ಬಿಐ, ಇಸಿಐಗೆ ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನಗಳೇನು?

ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆಗೆ ಅನುಮತಿ ನೀಡಿದ್ದ ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿತು.

Bar & Bench

ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಗುರುವಾರ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್‌ಗಳ ವಿತರಣೆಯನ್ನು ಕೂಡಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ಥಗಿತಗೊಳಿಸಬೇಕು ಎಂದು ಆದೇಶಿಸಿದೆ.

ಈ ಯೋಜನೆ ಮತ್ತು ಆದಾಯ ತೆರಿಗೆ ಕಾಯಿದೆ ಹಾಗೂ ಜನ ಪ್ರತಿನಿಧಿ ಕಾಯಿದೆಗೆ ಮಾಡಿದ ತಿದ್ದುಪಡಿಗಳನ್ನು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್‌ ಗವಾಯಿಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ  ಸರ್ವಾನುಮತದಿಂದ ರದ್ದುಗೊಳಿಸಿತು .

ಏಪ್ರಿಲ್ 12, 2019 ರಿಂದ ರಾಜಕೀಯ ಪಕ್ಷಗಳು ಸ್ವೀಕರಿಸಿದ ಮತ್ತು ನಗದೀಕರಿಸಿದ ಚುನಾವಣಾ ಬಾಂಡ್‌ ವಿವರಗಳನ್ನು ಬಹಿರಂಗ ಪಡಿಸುವ ನಿರ್ದೇಶನವೂ ಸೇರಿದಂತೆ ಈ ಸಂದರ್ಭದಲ್ಲಿ ನ್ಯಾಯಾಲಯ ವಿವಿಧ ನಿರ್ದೇಶನಗಳನ್ನು ನೀಡಿದೆ:

  1. ಚುನಾವಣಾ ಬಾಂಡ್‌ ವಿತರಣಾ ಬ್ಯಾಂಕ್, ಅಂದರೆ ಎಸ್‌ಬಿಐ ತಕ್ಷಣವೇ ಬಾಂಡ್‌ಗಳ ವಿತರಣೆಯನ್ನು ನಿಲ್ಲಿಸಬೇಕು;

  2. ಏಪ್ರಿಲ್ 12, 2019 ರಿಂದ ಇಲ್ಲಿಯವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಎಸ್‌ಬಿಐ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಬೇಕು.

  3. ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿಯೊಂದು ಚುನಾವಣಾ ಬಾಂಡ್‌ ವಿವರಗಳನ್ನು ಎಸ್‌ಬಿಐ (ಇಸಿಐಗೆ ನೀಡಿದ ಮಾಹಿತಿಯಲ್ಲಿ) ಬಹಿರಂಗಪಡಿಸಬೇಕು, ಇದರಲ್ಲಿ ನಗದೀಕರಣದ ದಿನಾಂಕ ಮತ್ತು ಚುನಾವಣಾ ಬಾಂಡ್‌ ಮೌಲ್ಯವನ್ನು ಸೇರಿಸಿರಬೇಕು. ಈ ಮಾಹಿತಿಯನ್ನು ಮಾರ್ಚ್ 6, 2024 ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.

  4. ಎಸ್‌ಬಿಐನಿಂದ ಈ ಮಾಹಿತಿ ಪಡೆದ ಒಂದು ವಾರದೊಳಗೆ, ಅಂದರೆ ಮಾರ್ಚ್ 13ರೊಳಗೆ ಇಸಿಐ ತನ್ನ ಅಧಿಕೃತ ಜಾಲತಾಣದಲ್ಲಿ ಆ ಮಾಹಿತಿಯನ್ನು ಪ್ರಕಟಿಸಬೇಕು.

  5. 15 ದಿನಗಳ ಸಿಂಧುತ್ವದ ಅವಧಿಯೊಳಗೆ ಇರುವ ಆದರೆ ರಾಜಕೀಯ ಪಕ್ಷಗಳು ಇನ್ನೂ ನಗದೀಕರಿಸದೆ ಇರುವ ಬಾಂಡ್‌ಗಳನ್ನು ಅವುಗಳನ್ನು ಖರೀದಿಸಿದ್ದವರಿಗೆ ರಾಜಕೀಯ ಪಕ್ಷಗಳು ಹಿಂತಿರುಗಿಸಬೇಕು.  ಬಾಂಡ್‌ ಹಿಂಪಡೆದ ಬಳಿಕ ಬಾಂಡ್‌ ವಿತರಿಸಿದ್ದ ‌ ಖರೀದಿದಾರರ ಖಾತೆಗೆ ಬ್ಯಾಂಕ್ ಹಣ ಹಿಂತಿರುಗಿಸಬೇಕು.