Supreme Court of India 
ಸುದ್ದಿಗಳು

ಪಂಚಾಯತ್ ಸದಸ್ಯೆಗೆ ಕಿರುಕುಳ: ಛತ್ತೀಸ್‌ಗಢ ಸರ್ಕಾರಕ್ಕೆ ಸುಪ್ರೀಂ ಛೀಮಾರಿ; ₹1 ಲಕ್ಷ ಪರಿಹಾರ ನೀಡುವಂತೆ ಸೂಚನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸುತ್ತಿನ ವಿಚಾರಣೆ ನಡೆಸಿದ್ದ ಛತ್ತೀಸ್‌ಗಢ ಹೈಕೋರ್ಟ್ ಸೋನಮ್ ವಿರುದ್ಧ ತೆಗೆದುಕೊಂಡ ಕ್ರಮಗಳನ್ನು ಎತ್ತಿಹಿಡಿದಿತ್ತು. ಹೀಗಾಗಿ ಆಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

Bar & Bench

ನಿರ್ಮಾಣ ಕಾಮಗಾರಿಯಲ್ಲಿನ ವಿಳಂಬದ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದ ವಿಚಾರಣೆ ಮುಕ್ತಾಯಗೊಳಿಸುವಂತೆ ಪಂಚಾಯತ್‌ ಸದಸ್ಯೆ ಮಾಡಿದ್ದ ಮನವಿ  ವಿರೋಧಿಸಿದ್ದ ಛತ್ತೀಸ್‌ಗಢ ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಗುರುವಾರ ಖಂಡಿಸಿದೆ [ ಸೋನಮ್ ಲಾಕ್ರಾ ಮತ್ತು ಛತ್ತೀಸ್‌ಗಢ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಸೋನಮ್ ಲಾಕ್ರಾ ಅವರಿಗೆ ಮರಳಿ ಪಂಚಾಯತ್‌ ಸದಸ್ಯತ್ವ ನೀಡಬೇಕು ಮತ್ತು ಆಕೆಗೆ ಕಿರುಕುಳ ನೀಡಿದ್ದಕ್ಕಾಗಿ ಜೊತೆಗೆ ಪಂಚಾಯತ್‌ ಸದಸ್ಯತ್ವದಿಂದ ಕೆಳಗಿಳಿಯುವಂತೆ ಮಾಡಿದ್ದಕ್ಕಾಗಿ ₹1 ಲಕ್ಷ ಪರಿಹಾರ ನೀಡುವಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಸೂಚಿಸಿದೆ.  

ಛತ್ತೀಸ್‌ಗಢದ ಕುಗ್ರಾಮದಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದ ಚುನಾಯಿತ ಪಂಚಾಯತ್‌ ಸದಸ್ಯೆಯನ್ನು ತೆಗೆದುಹಾಕಿರುವುದು ದಬ್ಬಾಳಿಕೆಯ ನಡೆ. ಆಕೆಯ ಬದ್ಧತೆಗಳನ್ನು ಮೆಚ್ಚುವ ಅಥವಾ ಸಹಾಯ ಹಸ್ತ ಚಾಚುವ ಬದಲು ಆಕೆಗೆ ಸಂಪೂರ್ಣ ಅನ್ಯಾಯ ಎಸಗಲಾಗಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ನಿರ್ಮಾಣ ಕಾಮಗಾರಿಗೆ ಇಂಜಿನಿಯರ್‌ಗಳು, ಗುತ್ತಿಗೆದಾರರು, ಸಕಾಲಕ್ಕೆ ಕಾರ್ಮಿಕರ ಪೂರೈಕೆ ಅಗತ್ಯವಿದ್ದು ವಿಳಂಬಕ್ಕಾಗಿ ಪಂಚಾಯತ್‌ ಸದಸ್ಯರನ್ನು ದೂರುವಂತಿಲ್ಲ ಎಂದು ಪೀಠ ಹೇಳಿತು.

ಪಂಚಾಯಿತಿಯೇ ನಿರ್ದಿಷ್ಟ ಕರ್ತವ್ಯದಲ್ಲಿ ವಿಳಂಬ ಉಂಟು ಮಾಡಿದ್ದರೆ ಕೆಲಸ ವಿಳಂಬವಾಗಿದ್ದಕ್ಕೆ ಪಂಚಾಯತ್‌ ಸದಸ್ಯೆಯನ್ನು ಗುರಿಮಾಡಲು ಹೇಗೆ ಸಾಧ್ಯ? ಹೀಗಾಗಿ ಕುಂಟುನೆಪ ಹೇಳಿ ಆಕೆಯನ್ನು ತೆಗೆದುಹಾಕಲಾಗಿದೆ ಎನಿಸುತ್ತಿದೆ. ಆಕೆ ತನ್ನ ಅವಧಿ ಮುಗಿಯುವವರೆಗೆ ಹುದ್ದೆಯಲ್ಲಿ ಮುಂದುವರೆಯಬೇಕು. ಮೇಲ್ಮನವಿದಾರೆಗೆ ಕಿರುಕುಳ ನೀಡಲಾಗಿದ್ದು ತಪ್ಪಿಸಬಹುದಾಗಿದ್ದ ದಾವೆಯಲ್ಲಿ ಸಿಲುಕಿಸಲಾಗಿದೆ ಎಂದು ಅದು ಕಿಡಿಕಾರಿತು.

ಸಂಬಂಧಪಟ್ಟ ಅಧಿಕಾರಿಗಳಿಂದ ಒಂದು ವಾರದೊಳಗೆ ಪರಿಹಾರಧನ ವಸೂಲಿ ಮಾಡಿ  ಆಕೆಗೆ ನೀಡುವಂತೆಯೂ ಪೀಠ ತಾಕೀತು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸುತ್ತಿನ ವಿಚಾರಣೆ ನಡೆಸಿದ್ದ ಛತ್ತೀಸ್‌ಗಢ ಹೈಕೋರ್ಟ್ ಸೋನಮ್ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಎತ್ತಿಹಿಡಿದಿತ್ತು. ಹೀಗಾಗಿ ಆಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.