ಜಿಲ್ಲಾ ನ್ಯಾಯಾಂಗ ಸದಸ್ಯರ ವೇತನ ಮತ್ತು ಸೇವಾ ಷರತ್ತುಗಳಿಗೆ ಸಂಬಂಧಿಸಿದಂತೆ ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವಂತೆ ಮತ್ತು ನ್ಯಾಯಾಂಗ ಅಧಿಕಾರಿಗಳ ಕುಂದುಕೊರತೆಗಳನ್ನು ನಿಭಾಯಿಸಲು ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಈಚೆಗೆ ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ.
ನ್ಯಾಯಾಧೀಶರು ಆರ್ಥಿಕ ಘನತೆಯೊಂದಿಗೆ ಜೀವನ ನಡೆಸಲು ಸಾಧ್ಯವಾದಾಗ ಮಾತ್ರ ಕಾನೂನಾತ್ಮಕ ಆಡಳಿತದಲ್ಲಿ ಸಾಮಾನ್ಯ ನಾಗರಿಕರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿ ಬೆಳೆಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.
ನ್ಯಾಯಾಂಗ ಸೇವೆ ಭಿನ್ನವಾಗಿದ್ದು ಇದನ್ನು ಸರ್ಕಾರದ ಉಳಿದ ಅಧಿಕಾರಿಗಳ ಸೇವೆಯೊಂದಿಗೆ ಸಮೀಕರಿಸುವುದು ಒಟ್ಟಾರೆ ಸೂಕ್ತವಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.
ಹೀಗಾಗಿ ಜಿಲ್ಲಾ ನ್ಯಾಯಾಂಗ ಸೇವಾ ಷರತ್ತುಗಳ ಸಮಿತಿಯನ್ನು ದೇಶದ ಪ್ರತಿಯೊಂದು ಹೈಕೋರ್ಟ್ ರಚಿಸಬೇಕು ಎಂದು ಆದೇಶಿಸಿರುವ ಅದು ಸಮಿತಿಯ ಸದಸ್ಯರ ವಿವರಗಳನ್ನು ಕೂಡ ನೀಡಿದೆ.
ಸಂಬಂಧಪಟ್ಟ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಾಮನಿರ್ದೇಶನ ಮಾಡಿದ ಹಿರಿಯ ನ್ಯಾಯಾಧೀಶರು ಸಮಿತಿಯ ಅಧ್ಯಕ್ಷರಾಗಿರಬೇಕು ಎಂದು ಉನ್ನತ ನ್ಯಾಯಾಲಯ ನಿರ್ದೇಶಿಸಿದೆ.
"ಗೃಹ, ಹಣಕಾಸು, ಆರೋಗ್ಯ, ಸಿಬ್ಬಂದಿ ಮತ್ತು ಲೋಕೋಪಯೋಗಿ ಇಲಾಖೆಗಳ ಕಾರ್ಯದರ್ಶಿಗಳು ಸೇರಿದಂತೆ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಅಧ್ಯಕ್ಷರು ಆಯ್ಕೆ ಮಾಡಬಹುದು. ನ್ಯಾಯಾಲಯ ಅನುಮೋದಿಸಿದಂತೆ ಎಸ್ಎನ್‌ಜೆಪಿಸಿಯ ಶಿಫಾರಸುಗಳು ಸೂಕ್ತ ರೀತಿಯಲ್ಲಿ ಜಾರಿಗೊಳಿಸಲು ಸಮಿತಿಯ ಅಧ್ಯಕ್ಷರು ತಮ್ಮ ವಿವೇಚನೆಯ ಮೇರೆಗೆ ಅಕೌಂಟೆಂಟ್ ಜನರಲ್ ಅವರನ್ನು ಆಯ್ಕೆ ಮಾಡಬಹುದು" ಎಂದು ಜನವರಿ 4ರಂದು ಹೊರಡಿಸಿದ ತೀರ್ಪಿನಲ್ಲಿ ತಿಳಿಸಲಾಗಿದೆ.
ನ್ಯಾಯಾಂಗ ಅಧಿಕಾರಿಗಳು, ನಿವೃತ್ತ ನ್ಯಾಯಾಂಗ ಅಧಿಕಾರಿಗಳು ಮತ್ತು ಕುಟುಂಬ ಪಿಂಚಣಿದಾರರಿಗೆ ಪಾವತಿಸಬೇಕಾದ ವೇತನ, ಪಿಂಚಣಿ ಮತ್ತು ಭತ್ಯೆಗಳ ಬಾಕಿಯ ವಿತರಣೆಯನ್ನು ಫೆಬ್ರವರಿ 29, 2024 ರಂದು ಅಥವಾ ಅದಕ್ಕೂ ಮೊದಲು ಲೆಕ್ಕಹಾಕಿ ಪಾವತಿಸಬೇಕು ಎಂದು ಕೂಡ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ವೇತನ ಮತ್ತಿತರ ಅಂಶಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಹೈಕೋರ್ಟ್ ಸಮಿತಿಗಳು ಮೇಲ್ವಿಚಾರಣೆ ಮಾಡಬೇಕಿದ್ದು ಹೈಕೋರ್ಟ್ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಸಮಿತಿಯು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರ ಮೂಲಕ ಏಪ್ರಿಲ್ 7, 2024 ರಂದು ಅಥವಾ ಅದಕ್ಕೂ ಮೊದಲು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]