Supreme Court  
ಸುದ್ದಿಗಳು

ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ದೊರೆಯುವಂತೆ ನೋಡಿಕೊಳ್ಳಿ: ರಾಜ್ಯ ಸರ್ಕಾರಗಳಿಗೆ ಸುಪ್ರೀಂ ನಿರ್ದೇಶನ

ವಲಸಿಗರು ಆಹಾರಧಾನ್ಯಗಳಂತಹ ಪ್ರಯೋಜನಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಕಲ್ಯಾಣ ರಾಜ್ಯ ಬಯಸುವ ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ಹೇಳಿದ ಪೀಠ.

Bar & Bench

ಪಡಿತರ ಪಡೆಯಲು ಅರ್ಹರಾಗಿರುವ ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಕಾರ್ಡ್‌ಗಳನ್ನು ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ  ನೀಡಿದೆ [ವಲಸೆ ಕಾರ್ಮಿಕರ ಸಮಸ್ಯೆಗಳು ಮತ್ತು ಸಂಕಷ್ಟಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಳ್ಳಲಾದ ಸ್ವಯಂ ಪ್ರೇರಿತ ಅರ್ಜಿ].

ವಲಸಿಗರು ಆಹಾರಧಾನ್ಯಗಳಂತಹ ಪ್ರಯೋಜನಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಕಲ್ಯಾಣ ರಾಜ್ಯ ಬಯಸುವ ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿದೆ.

ಇ-ಶ್ರಮ್‌ ಯೋಜನೆಯಡಿ ನೋಂದಾಯಿಸಿಕೊಂಡ 28.60 ಕೋಟಿ ಮಂದಿಯಲ್ಲಿ 20.63 ಕೋಟಿ ಮಂದಿಗೆ ಪಡಿತರ ಚೀಟಿ ವಿತರಣೆಯಾಗಿದೆ. ಇದರರ್ಥ ಉಳಿದ ನೋಂದಾಯಿತರಿಗೆ ಇನ್ನೂ ಪಡಿತರ ಚೀಟಿ ಲಭ್ಯವಾಗಿಲ್ಲ. ಪಡಿತರ ಚೀಟಿ ಇಲ್ಲದೆ ವಲಸೆ/ಅಸಂಘಟಿತ ಕಾರ್ಮಿಕರು ಅಥವಾ ಅವರ ಕುಟುಂಬ ಸದಸ್ಯರು ವಿವಿಧ ಯೋಜನೆಗಳು ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಒದಗಿಸಲಾದ ಸೌಲಭ್ಯಗಳಿಂದ ವಂಚಿತರಾಗಬಹುದು. ಆದ್ದರಿಂದ ಕಲ್ಯಾಣ ರಾಜ್ಯವಾಗಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಪಡಿತರ ಚೀಟಿ ಇಲ್ಲದವವರಿಗೆ ಇ-ಶ್ರಮ್‌ ಅಡಿ ನೋಂದಾಯಿಸಿಕೊಳ್ಳದವರಿಗೆ ತ್ವರಿತವಾಗಿ ಪಡಿತರ ಚೀಟಿ ವಿತರಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿದಾರರ ಮೂಲಕ ವಲಸಿಗರ ಮಾಹಿತಿ ಹೊಂದಿವೆ ಎಂಬುದನ್ನು ಗಮನಿಸಿದ ಪೀಠ ಇನ್ನೂ ಪಡಿತರ ಚೀಟಿ ದೊರೆಯದೆ ಇರುವವರನ್ನು ಸರ್ಕಾರಗಳು ಸಂಪರ್ಕಿಸಬೇಕು ಎಂದು ಹೇಳಿತು.

ಈ ಪ್ರಕ್ರಿಯೆಗೆ ಪೀಠ ಮೂರು ತಿಂಗಳ ಗಡುವು ನೀಡಿದ್ದು ಅದರ ಬಗ್ಗೆ ವ್ಯಾಪಕ ಪ್ರಚಾರ ನಡೆಸುವಂತೆ ಸೂಚಿಸಿತು. ಪ್ರಕ್ರಿಯೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಪ್ರಕರಣವನ್ನು ಬರುವ ಅಕ್ಟೋಬರ್ 3ಕ್ಕೆ ಮುಂದೂಡಲಾಗಿದೆ.

ಕೋವಿಡ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರರಾದ ಹರ್ಷ್ ಮಂದರ್, ಅಂಜಲಿ ಭಾರದ್ವಾಜ್ ಹಾಗೂ ಜಗದೀಪ್ ಚೋಕರ್ ಅವರು ಸಲ್ಲಿಸಿದ್ದ ತುರ್ತು ಅರ್ಜಿಯ ಬಳಿಕ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.