Sambhal Jama Masjid 
ಸುದ್ದಿಗಳು

ಸಂಭಲ್‌ ಜುಮ್ಮಾ ಮಸೀದಿ ಬಾವಿಯಲ್ಲಿ ಪೂಜೆ ಪುನಸ್ಕಾರ ನಿರ್ಬಂಧಿಸಿದ ಸುಪ್ರೀಂ

ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಆದೇಶಿಸಿದ್ದ ಸಿವಿಲ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂಭಲ್‌ನ ಶಾಹಿ ಜುಮ್ಮಾ ಮಸೀದಿಯ ಮ್ಯಾನೇಜ್‌ಮೆಂಟ್‌ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

Bar & Bench

ಸಂಭಲ್‌ನಲ್ಲಿರುವ ವಿವಾದಿತ ಶಾಹಿ ಜುಮ್ಮಾ ಮಸೀದಿ ಸಮೀಪವಿರುವ ಬಾವಿಯಲ್ಲಿ ಪೂಜೆ ಪುನಸ್ಕಾರ ಅಥವಾ ಬೇರಾವುದೇ ಚಟುವಟಿಕೆ ನಡೆಸದಂತೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಸಂಭಲ್‌ ಪ್ರಾಧಿಕಾರಿಗಳು ಭಾವಿಗೆ ಸಂಬಂಧಿಸಿದಂತೆ ಜಾರಿ ಮಾಡಿದ್ದ ನೋಟಿಸ್‌ಗೆ ತಡೆಯಾಜ್ಞೆ ವಿಧಿಸಿರುವ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್‌ ಕುಮಾರ್‌ ಅವರ ವಿಭಾಗೀಯ ಪೀಠವು ಸ್ಥಿತಿಗತಿ ವರದಿ ಸಲ್ಲಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಿದೆ.

“ಫೆಬ್ರವರಿ 21ರೊಳಗೆ ನೋಟಿಸ್‌ಗೆ ಆಕ್ಷೇಪಣೆ ಸಲ್ಲಿಸಬೇಕು. ಪ್ರತಿವಾದಿಗಳು ಎರಡು ವಾರಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸಬೇಕು. ಬಾವಿಗೆ ಸಂಬಂಧಿಸಿದಂತೆ ಪ್ರತಿವಾದಿಗಳು ಯಾವುದೇ ನೋಟಿಸ್‌ ಅನ್ನು ಕಾರ್ಯಗತಗೊಳಿಸಲು ಮುಂದಾಗಬಾರದು” ಎಂದು ನ್ಯಾಯಾಲಯ ಆದೇಶಿಸಿದೆ.

ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಆದೇಶಿಸಿದ್ದ ಸಿವಿಲ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂಭಲ್‌ನ ಶಾಹಿ ಜುಮ್ಮಾ ಮಸೀದಿಯ ಮ್ಯಾನೇಜ್‌ಮೆಂಟ್‌ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಮೊಘಲರ ಕಾಲದಲ್ಲಿ ದೇವಸ್ಥಾನ ನಾಶಪಡಿಸಿ ಅದರ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿ ಸಿವಿಲ್‌ ನ್ಯಾಯಾಲಯವು ನಿರ್ದೇಶನ ನೀಡಿತ್ತು.

ತನ್ನ ಇತ್ತೀಚಿನ ಅರ್ಜಿಯಲ್ಲಿ, ಮಸೀದಿ ಸಮಿತಿಯು ಸಂಭಲ್ ಜಿಲ್ಲಾಡಳಿತವು "ಹಳೆಯ ದೇವಾಲಯಗಳು ಮತ್ತು ಬಾವಿಗಳ ಪುನರುಜ್ಜೀವನ" ಎಂದು ಕರೆಯಲ್ಪಡುವ ತನ್ನ ಕಾರ್ಯಕ್ರಮದ ಮೂಲಕ ಮಸೀದಿ ಸಮೀಪದ ಬಾವಿಗೆ ಸಾರ್ವಜನಿಕರು ಪ್ರವೇಶಿಸಲು ಪ್ರಚಾರ ನೀಡುತ್ತಿದೆ. ಜಿಲ್ಲಾಡಳಿತವು ಹೊರಡಿಸಿರುವ ಪ್ರಕಟಣೆಯಲ್ಲಿ ಮಸೀದಿಯನ್ನು ದೇವಸ್ಥಾನ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಅರ್ಜಿಯಲ್ಲಿ ಸಮಿತಿಯು "ಸಂಭಲ್ ಸುತ್ತಲೂ ಮತ್ತು ಮಸೀದಿಯ ಬಳಿ ಐತಿಹಾಸಿಕ ಬಾವಿಗಳ ಸ್ಥಳವನ್ನು ಸೂಚಿಸುವ ಪೋಸ್ಟರ್‌ಗಳನ್ನು ಸಹ ಹಾಕಲಾಗಿದೆ ಮತ್ತು ಅದರಲ್ಲಿ ಮಸೀದಿಯನ್ನು ದೇವಾಲಯವೆಂದು ತೋರಿಸಲಾಗಿದೆ. ಈ ಪೋಸ್ಟರ್‌ಗಳಲ್ಲಿ 'ನಗರ ಪಾಲಿಕೆ ಪರಿಷತ್, ಸಂಭಲ್' ಎನ್ನುವ ಅಡಿಬರವೂ ಇದೆ" ಎಂದು ಆಕ್ಷೇಪಿಸಿದೆ.