ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ನಿಯಂತ್ರಣ, ನಿಷೇಧ ಮತ್ತು ಪರಿಹಾರ) ಕಾಯಿದೆ (ಪಿಒಎಸ್‌ಎಚ್) ಅಸ್ತಿತ್ವಕ್ಕೆ ಬಂದು ದಶಕ ಕಳೆದಿದ್ದರೂ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಗಂಭೀರ ಲೋಪ ಉಂಟಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ [ಆರ್ಲಿಯಾನೊ ಫರ್ನಾಂಡಿಸ್ ಮತ್ತು ಗೋವಾ ಸರ್ಕಾರ ಇನ್ನತರರ ನಡುವಣ ಪ್ರಕರಣ].
ರಾಷ್ಟ್ರೀಯ ದಿನಪತ್ರಿಕೆಯೊಂದು ನಡೆಸಿದ ಸಮೀಕ್ಷೆ ಪ್ರಕಾರ, ದೇಶದ 30 ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಲ್ಲಿ 16 ಒಕ್ಕೂಟಗಳು ಇದುವರೆಗೆ ಆಂತರಿಕ ದೂರು ಸ್ವೀಕಾರ ಸಮಿತಿ (ಐಸಿಸಿ) ಹೊಂದಿಲ್ಲ ಎಂಬ ಅಂಶವನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ʼಇದು ವಿಷಾದನೀಯ ಸ್ಥಿತಿಯನ್ನು ಬಿಂಬಿಸುತ್ತದೆʼ ಎಂದಿತು.
ಸರ್ಕಾರದ ಎಲ್ಲಾ ಅಧಿಕಾರಿಗಳು, ಸಾರ್ವಜನಿಕ ಹುದ್ದೆಯಲ್ಲಿರುವವರು, ಖಾಸಗಿ ಸಂಘ ಸಂಸ್ಥೆಗಳು, ಮಹಿಳಾ ದೌರ್ಜನ್ಯ ತಡೆ ಕಾಯಿದೆಯನ್ನು ಉತ್ಸಾಹದಿಂದ ಜಾರಿಗೊಳಿಸಲು ಬದ್ಧರಾಗಿರಬೇಕು ಎಂದು ನ್ಯಾಯಾಲಯ ಒತ್ತಿಹೇಳಿದೆ.
“ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರು ಲೈಂಗಿಕ ಕಿರುಕುಳ ಎದುರಿಸಿದಾಗ ಅಂತಹ ದುರ್ನಡತೆ ಬಗ್ಗೆ ವರದಿ ಮಾಡಲು ಅವರು ಹಿಂಜರಿಯುತ್ತಾರೆ. ಅವರಲ್ಲಿ ಅನೇಕರು ಕೆಲಸ ತೊರೆದುಬಿಡುತ್ತಾರೆ. ಘಟನೆಯನ್ನು ವರದಿ ಮಾಡುವ ಹಿಂಜರಿಕೆಗೆ ಒಂದು ಕಾರಣವೆಂದರೆ ಸಮಸ್ಯೆ ಪರಿಹಾರಕ್ಕೆ ಕಾಯಿದೆಯಡಿ ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಅನಿಶ್ಚಿತತೆ ಇರುವುದು. ಮತ್ತೊಂದು ಅದರ ಪ್ರಕ್ರಿಯೆ ಮತ್ತು ಫಲಿತಾಂಶದ ಬಗೆಗಿನ ಅವಿಶ್ವಾಸ. ಕಾಯಿದೆಯ ದೃಢವಾದ ಮತ್ತು ಸಮರ್ಥ ಅನುಷ್ಠಾನದ ಮೂಲಕ ಈ ಸಾಮಾಜಿಕ ಪಿಡುಗಿನ ಬಗ್ಗೆ ತುರ್ತಾಗಿ ಸುಧಾರಣೆ ಜಾರಿಗೆ ತರುವ ಅಗತ್ಯವಿದೆ” ಎಂದು ನ್ಯಾಯಾಲಯ ನುಡಿದಿದೆ.
ಇದನ್ನು ಸಾಧಿಸಲು ಕಾಯಿದೆಯ ಮಹತ್ವ ಮತ್ತು ಅದರ ಕಾರ್ಯನಿರ್ವಹಣೆ ಕುರಿತು ಸಂತ್ರಸ್ತರಲ್ಲಿ ಅರಿವು ಮೂಡಿಸುವುದು ಕಡ್ಡಾಯ ಎಂದು ಪೀಠ ಹೇಳಿದೆ.
ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೃಢ ಕ್ರಮಗಳನ್ನು ಕೈಗೊಂಡು ಮಹಿಳಾ ದೌರ್ಜನ್ಯ ತಡೆ ಕಾಯಿದೆಯ ಆಶಯವನ್ನು ಅಕ್ಷರಶಃ ಜಾರಿಗೆ ತರುವಂತೆ ನೋಡಿಕೊಳ್ಳಬೇಕು ಎಂದು ಅದು ಸೂಚಿಸಿದೆ. ಕಾಯಿದೆ ಜಾರಿ ಸಂಬಂಧ ವಿವಿಧ ನಿರ್ದೇಶನಗಳನ್ನೂ ನ್ಯಾಯಾಲಯ ನೀಡಿದೆ.
ಸರ್ಕಾರ ಮತ್ತು ಸರ್ಕಾರೇತರ ಅಂಗಗಳು ಕಟ್ಟುನಿಟ್ಟಿನ ಪಾಲನೆ ಮತ್ತು ಸಕಾರಾತ್ಮಕ ಕ್ರಿಯೆ ಅಳವಡಿಸಿಕೊಳ್ಳದ ವಿನಾ ಮಹಿಳೆಯರಿಗೆ ಗೌರವ ಒದಗಿಸುವ ನಿಟ್ಟಿನಲ್ಲಿ ಮಹಿಳಾ ಕಾಯಿದೆ ಯಶಸ್ವಿಯಾಗುವುದಿಲ್ಲ ಎಂದು ಕೂಡ ಅದು ಎಚ್ಚರಿಕೆ ನೀಡಿದೆ.