Supreme Court and Anil Deshmukh
Supreme Court and Anil Deshmukh 
ಸುದ್ದಿಗಳು

ಭ್ರಷ್ಟಾಚಾರ ಪ್ರಕರಣ: ಸಿಬಿಐ ಎಫ್ಐಆರ್ ರದ್ದುಗೊಳಿಸುವಂತೆ ದೇಶಮುಖ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Bar & Bench

ಮುಂಬೈ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಬುಧವಾರ ವಜಾಗೊಳಿಸಿದೆ. ಸಿಬಿಐ ಎಫ್‌ಐಆರ್‌ ರದ್ದುಗೊಳಿಸಲು ಬಾಂಬೆ ಹೈಕೋರ್ಟ್‌ ಈ ಹಿಂದೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ದೇಶಮುಖ್‌ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

ದೇಶಮುಖ್ ಮತ್ತು ಸಿಬಿಐ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂಆರ್ ಶಾ ಅವರಿದ್ದ ಪೀಠ ಸಂವಿಧಾನದ 136ನೇ ಪರಿಚ್ಛೇದದ ಅಡಿಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಮತ್ತು ಹೈಕೋರ್ಟ್ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ ಎಂದು ಅಭಿಪ್ರಾಯಪಟ್ಟಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ದೇಸಾಯಿ, ಮಹಾರಾಷ್ಟ್ರದಲ್ಲಿ ರಾಜ್ಯ ಸರ್ಕಾರದ ಅನುಮತಿ ಪಡೆದ ಬಳಿಕವಷ್ಟೇ ಸಿಬಿಐ ತನಿಖೆ ನಡೆಸಲು ಸಾಧ್ಯ ಎಂದರು. ಅರ್ಜಿದಾರರು ತಮ್ಮ ಪ್ರಕರಣಕ್ಕೆ ಆಧಾರವಾಗಿ ಲಲಿತಾ ಕುಮಾರಿ ಮತ್ತು ಉತ್ತರಪ್ರದೇಶ ಸರ್ಕಾರ ನಡವಣ ಪ್ರಕರಣದ ತೀರ್ಪನ್ನು ಅವಲಂಬಿಸಿದ್ದರು. ಅಲ್ಲದೆ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಸಾರ್ವಜನಿಕ ಸೇವಕರು ಎಸಗಿದ ಅಪರಾಧದ ಬಗ್ಗೆ ಯಾವುದೇ ತನಿಖೆ ನಡೆಸಬಾರದು ಎಂದು ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 17 ಎ ತಡೆಯುವುದರಿಂದ ಸಿಬಿಐ ಎಫ್‌ಐಆರ್‌ ದಾಖಲಿಸುವಂತಿಲ್ಲ ಎಂಬುದು ಅರ್ಜಿದಾರರ ವಾದವಾಗಿತ್ತು.

ಇದೇ ವೇಳೆ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಹೈಕೋರ್ಟ್‌ ಆದೇಶದ ಮೇರೆಗೆ ತನಿಖೆ ನಡೆಯುತ್ತಿದೆ ಮತ್ತು ಯಾವುದೇ ಕಾನೂನು, ಸಾಂವಿಧಾನಿಕ ನ್ಯಾಯಾಲಯದ ಅಧಿಕಾರವನ್ನು ಬಹಿಷ್ಕರಿಸಲು ಅಥವಾ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ಪೊಲೀಸ್‌ ಅಧಿಕಾರಿಗಳ ವರ್ಗಾವಣೆ, ನಿಯೋಜನೆಗೆ ಸಂಬಂಧಿಸಿದಂತೆ ಸಿಬಿಐ ದೇಶಮುಖ್‌ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠ ಇಂದು ಬೆಳಿಗ್ಗೆಯಷ್ಟೇ ವಜಾ ಮಾಡಿತ್ತು.