ಸತ್ಯೇಂದರ್ ಜೈನ್ ಮತ್ತು ಸುಪ್ರೀಂ ಕೋರ್ಟ್
ಸತ್ಯೇಂದರ್ ಜೈನ್ ಮತ್ತು ಸುಪ್ರೀಂ ಕೋರ್ಟ್ ಫೇಸ್ ಬುಕ್
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಎಎಪಿಯ ಸತ್ಯೇಂದರ್ ಜೈನ್ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದರ್ ಜೈನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಜೈನ್‌ ಅವರು ಕೂಡಲೇ ಜೈಲು ಅಧಿಕಾರಿಗಳೆದುರು ಶರಣಾಗುವಂತೆ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಆದೇಶಿಸಿತು. ಜೈನ್ ವೈದ್ಯಕೀಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

"ಎಲ್ಲಾ ಮೇಲ್ಮನವಿಗಳನ್ನು ವಜಾಗೊಳಿಸಲಾಗಿದೆ. ಸತ್ಯೇಂದರ್ ಜೈನ್ ಅವರು ತಕ್ಷಣವೇ ಶರಣಾಗಬೇಕು' ಎಂದು ನ್ಯಾಯಾಲಯ ಆದೇಶಿಸಿತು.

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌

ದೆಹಲಿಯ ಮಾಜಿ ಆರೋಗ್ಯ ಸಚಿವ ಜೈನ್ ಅವರನ್ನು ಮೇ 2022ರಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಬಂಧಿಸಿತ್ತು. ವೈದ್ಯಕೀಯ ಆಧಾರದ ಮೇಲೆ ಮೇ 2023ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆಯುವ ಮುನ್ನ ಅವರು ಒಂದು ವರ್ಷ ಜೈಲಿನಲ್ಲಿದ್ದರು. ನಂತರ ಜಾಮೀನು ಅವಧಿಯನ್ನು ನ್ಯಾಯಾಲಯ ವಿಸ್ತರಿಸಿತ್ತು.

ಜೈನ್ ಅವರು 2015 ಮತ್ತು 2017ರ ನಡುವೆ ಬೇನಾಮಿ ಆಸ್ತಿ ಸಂಪಾದಿಸಿದ ಆರೋಪದಡಿ ಸಿಬಿಐ ಭ್ರಷ್ಟಾಚಾರ ತಡೆ ಕಾಯಿದೆ- 1988 ರ ಸೆಕ್ಷನ್ 13 (2) (ಸಾರ್ವಜನಿಕ ಸೇವೆ ಸಲ್ಲಿಸುವವರಿಂದ ಕ್ರಿಮಿನಲ್ ದುರ್ನಡತೆ) ಮತ್ತು 13 (ಇ) (ಅಕ್ರಮ ಆಸ್ತಿ ಸಂಪಾದನೆ) ಅಡಿ ಪ್ರಕರಣ ದಾಖಲಿಸಿತ್ತು.

ನಂತರ ಅವರ ಒಡೆತನದ ಇಲ್ಲವೇ ನಿಯಂತ್ರಣದಲ್ಲಿರುವ ವಿವಿಧ ಕಂಪೆನಿಗಳು ಹವಾಲಾ ಮೂಲಕ ಹಣ ಸಂಗ್ರಹಿಸುತ್ತಿದ್ದವು ಎಂದು ಇ ಡಿ ಕೂಡ ಆರೋಪ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಅವರ ಬಂಧನವಾಗಿತ್ತು. ವಿಚಾರಣಾ ನ್ಯಾಯಾಲಯ ಹಾಗೂ ದೆಹಲಿ ಹೈಕೋರ್ಟ್‌ಗಳೆರಡೂ ಅವರಿಗೆ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.