ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿನ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಹಾಜಿ ಅಬ್ದುಲ್ ಗನಿ ಖಾನ್ ಮತ್ತು ಇತರರು ವರ್ಸಸ್ ಭಾರತ ಒಕ್ಕೂಟ ಮತ್ತು ಇತರರ ನಡುವಿನ ಪ್ರಕರಣ].
ಸಂವಿಧಾನದ 370ನೇ ವಿಧಿ ರದ್ದತಿ ಪ್ರಶ್ನಿಸಿರುವ ಅರ್ಜಿಗಳು ಬಾಕಿ ಉಳಿದಿದ್ದು ಅವುಗಳಲ್ಲಿ ಒಂದಾದ ಜಮ್ಮು ಮತ್ತು ಕಾಶ್ಮೀರ ಮರು-ಸಂರಚನೆ ಕಾಯಿದೆ- 2019ರ ಕುರಿತ ಅರ್ಜಿಗೆ ಸಂಬಂಧಿಸಿದಂತೆ ತಾನಿನ್ನೂ ತೀರ್ಪು ನೀಡಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರಿದ್ದ ಪೀಠ ಹೇಳಿದೆ.
ಎರಡು ದಿನಗಳ ಕಾಲ ವಕೀಲರ ವಾದವನ್ನು ಆಲಿಸಿದ ನಂತರ ಡಿಸೆಂಬರ್ 1ರಂದು ಜಮ್ಮು ಕಾಶ್ಮೀರ ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ತೀರ್ಪನ್ನು ಪೀಠ ಕಾಯ್ದಿರಿಸಿತ್ತು.
ಶ್ರೀನಗರದ ನಿವಾಸಿಗಳಾದ ಹಾಜಿ ಅಬ್ದುಲ್ ಗನಿ ಖಾನ್ ಮತ್ತು ಡಾ ಮೊಹಮ್ಮದ್ ಅಯೂಬ್ ಮಟ್ಟೂ ಅವರು ಕೇಂದ್ರಾಡಳಿತ ಪ್ರದೇಶದಲ್ಲಿ ಸೀಟುಗಳ ಸಂಖ್ಯೆಯನ್ನು 107 ರಿಂದ 114 ಕ್ಕೆ ಹೆಚ್ಚಿಸಿರುವುದನ್ನು ಪ್ರಶ್ನಿಸಿದ್ದರು. ಇದು ಸಂವಿಧಾನದ 81, 82, 170, 330 ಹಾಗೂ 332ನೇ ವಿಧಿಯನ್ನು ಹಾಗೂ ಜಮ್ಮು ಮತ್ತು ಕಾಶ್ಮೀರ ಮರು-ಸಂಘಟನೆ ಕಾಯಿದೆ- 2019 ರ ಸೆಕ್ಷನ್ 63ನ್ನು ಉಲ್ಲಂಘಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದರು.