ಸತ್ಸಂಗದ ಸಂಸ್ಥಾಪಕ ಶ್ರೀ ಠಾಕೂರ್ ಅನುಕೂಲ್‌ಚಂದ್ರ ಅವರನ್ನು 'ಪರಮಾತ್ಮ' ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಇಂತಹ ಕೋರಿಕೆ ಸಲ್ಲಿಸಬಾರದು ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ತಪ್ಪು ಗ್ರಹಿಕೆಯಿಂದ ಕೂಡಿದ ಮನವಿ ಸಲ್ಲಿಸಿದ್ದ ಅರ್ಜಿದಾರರಿಗೆ ₹ 1 ಲಕ್ಷ ದಂಡ ವಿಧಿಸಿತು.
"ಹಮ್ ಯೇ ಉಪನ್ಯಾಸ ನಹೀ ಸುನ್ನೆ ಆಯೆ ಹೈಂ. ಹಮ್ ಸೆಕ್ಯುಲರ್ ದೇಶ್ ಹೈಂ. ಪಿಐಎಲ್ ಕಾ ಕೋಯಿ ಮತ್ಲಬ್ ಹೋತಾ ಹೈ. (ಉಪನ್ಯಾಸ ಕೇಳಲು ನಾವಿಲ್ಲ ಬಂದಿಲ್ಲ, ನಮ್ಮದು ಜಾತ್ಯತೀತ ದೇಶ. ಪಿಐಎಲ್ ಎಂಬುದಕ್ಕೆ ಅರ್ಥ ಇರುತ್ತದೆ)" ಎಂದು ನ್ಯಾಯಮೂರ್ತಿ ಶಾ ಹೇಳಿದರು. ಉಪೇಂದ್ರನಾಥ್ ದಲೈ ಎಂಬುವವರು ಅರ್ಜಿ ಸಲ್ಲಿಸಿದ್ದರು.
“ಶ್ರೀ ಠಾಕೂರ್ ಅನುಕೂಲ್‌ಚಂದ್ರ ಅವರನ್ನು ತನ್ನ ದೇವರೆಂದು ಪರಿಗಣಿಸಲು ಅರ್ಜಿದಾರರು ಸ್ವತಂತ್ರರಾಗಿದ್ದರೂ, ಅದನ್ನು ಇತರರ ಮೇಲೆ ಹೇರುವಂತಿಲ್ಲ” ಎಂದು ನ್ಯಾಯಾಲಯ ಹೇಳಿದೆ.
"ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಪಿಐಎಲ್ ಮೂಲಕ ಅಂತಹ ಪ್ರಾರ್ಥನೆ ಮಾಡುವಂತಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಪೀಠ ಆದೇಶದಲ್ಲಿ ತಿಳಿಸಿದೆ.