ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಸಶಸ್ತ್ರ ಪಡೆಗಳ ನ್ಯಾಯಮಂಡಳಿಗಳಲ್ಲಿ ಖಾಲಿ ಹುದ್ದೆಗಳಿಗೆ ಅನುಭವಿ ವಕೀಲರ ನೇಮಕ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

"ಅನುಭವಿ ವಕೀಲರನ್ನು ನೇಮಿಸಿ ಎಂದು ನಾವು ಹೇಳಲಾಗದು. ನಾವು ಸ್ವತಃ ವಿವರಿಸಿದ್ದೇವೆ. ಅರ್ಜಿ ವಜಾಗೊಳಿಸಲಾಗಿದೆ" ಎಂದು ಪೀಠ ಮೌಖಿಕವಾಗಿ ಹೇಳಿತು.

Bar & Bench

ದೇಶದೆಲ್ಲೆಡೆಯ ಸಶಸ್ತ್ರ ಪಡೆಗಳ ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಮತ್ತು "ಅನುಭವಿ" ವಕೀಲರನ್ನು ನೇಮಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ (ಇಶಾನ್ ಗಿಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).

ನೇಮಕಾತಿ ಪ್ರಕ್ರಿಯೆ (ಅನುಭವಿ ನ್ಯಾಯವಾದಿಗಳಿಗಷ್ಟೇ ಅಲ್ಲದೆ) ಎಲ್ಲಾ ವಕೀಲರಿಗೆ ಮುಕ್ತವಾಗಿದ್ದು ನೇಮಕಾತಿ ಮೇಲ್ವಿಚಾರಣಾ ಸಮಿತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿವೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿತು.

"ಯಾವುದೇ ವಕೀಲರು (ನೇಮಕಾತಿ ಕುರಿತ) ಜಾಹೀರಾತು ಇದ್ದಾಗಲೆಲ್ಲಾ ಅರ್ಜಿ ಸಲ್ಲಿಸಬಹುದು ... ಈ ಸಮಿತಿಗಳ ನೇತೃತ್ವವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ವಹಿಸುತ್ತಾರೆ" ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.

ಸಶಸ್ತ್ರ ಪಡೆಗಳ ನ್ಯಾಯಮಂಡಳಿಗಳಲ್ಲಿನ ಹದಿನೇಳು ಪೀಠಗಳಲ್ಲಿ, ಕೇವಲ ನಾಲ್ಕು ಮಾತ್ರ 2021ರಲ್ಲಿ ಕಾರ್ಯನಿರ್ವಹಿಸಿದ್ದು ಸುಮಾರು 19,000 ಪ್ರಕರಣಗಳ ನಿರ್ವಹಣೆಯ ಹೊಣೆ ಅವುಗಳ ಮೇಲಿದೆ ಎಂದು ಅರ್ಜಿದಾರರು ದೂರಿದ್ದರು.

ಆದರೂ ಪೀಠ ಪ್ರಕರಣ ಪರಿಗಣಿಸಲು ಒಲವು ತೋರಲಿಲ್ಲ, "ಅನುಭವಿ" ವಕೀಲರನ್ನು ಮಾತ್ರ ನೇಮಿಸಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿತು.

"ನಿಮ್ಮ ಅರ್ಜಿ ತಪ್ಪಾಗಿದೆ. ಅನುಭವಿ ವಕೀಲರನ್ನು ನೇಮಿಸಿ ಎಂದು ನಾವು ಹೇಳಲು ಸಾಧ್ಯವಿಲ್ಲ. ನಾವು ಸ್ವತಃ ಈ ಬಗ್ಗೆ ವಿವರಿಸಿದ್ದೇವೆ. (ಅರ್ಜಿ) ವಜಾ ಮಾಡಲಾಗಿದೆ" ಎಂದು ಸಿಜೆಐ ಚಂದ್ರಚೂಡ್ ಹೇಳಿದರು.