Supreme Court and Salman Rushdie's The Satanic Verses 
ಸುದ್ದಿಗಳು

ಲೇಖಕ ರಶ್ದಿ ಅವರ 'ದ ಸೆಟಾನಿಕ್‌ ವರ್ಸಸ್‌' ನಿಷೇಧ ಕೋರಿದ್ದ ಪಿಐಎಲ್‌ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಪುಸ್ತಕದ ಮೇಲೆ ನಿಷೇಧ ಹೇರುವ 1988 ರ ಅಧಿಸೂಚನೆಯನ್ನು ಅಧಿಕಾರಿಗಳು ನ್ಯಾಯಾಲಯದ ಮುಂದಿರಿಸಲು ಸಾಧ್ಯವಾಗದ ಕಾರಣ, ಅಂತಹ ಯಾವುದೇ ಆದೇಶ ಎಂದಿಗೂ ಜಾರಿಯಲ್ಲಿರಲಿಲ್ಲ ಎಂದು ಭಾವಿಸಬೇಕು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

Bar & Bench

ಸಲ್ಮಾನ್ ರಶ್ದಿ ಅವರ ವಿವಾದಾತ್ಮಕ ಪುಸ್ತಕ 'ದ ಸಟಾನಿಕ್ ವರ್ಸಸ್'ಅನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಮೊಹಮ್ಮದ್ ಅರ್ಷದ್ ಮೊಹಮ್ಮದ್ ಜಮಾಲ್ ಖಾನ್ & ಅದರ್ಸ್. ವರ್ಸಸ್ ಯೂನಿಯನ್ ಆಫ್ ಇಂಡಿಯಾ & ಅದರ್ಸ್].

ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠವು ಈ ವಿಷಯದಲ್ಲಿ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿತ್ತು.

ಪುಸ್ತಕದ ಮೇಲೆ ನಿಷೇಧ ಹೇರುವ 1988 ರ ಅಧಿಸೂಚನೆಯನ್ನು ಅಧಿಕಾರಿಗಳು ನ್ಯಾಯಾಲಯದ ಮುಂದಿರಿಸಲು ಸಾಧ್ಯವಾಗದ ಕಾರಣ, ಅಂತಹ ಯಾವುದೇ ಆದೇಶ ಎಂದಿಗೂ ಜಾರಿಯಲ್ಲಿರಲಿಲ್ಲ ಎಂದು ಭಾವಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಪುಸ್ತಕದ ಆಮದನ್ನು ನಿಷೇಧಿಸುವ 1988 ರ ಅಧಿಸೂಚನೆಯನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಹೈಕೋರ್ಟ್‌ಗೆ ತಿಳಿಸಿದ ನಂತರ ಈ ಬೆಳವಣಿಗೆಗಳು ನಡೆದಿವೆ.

ಇದರರ್ಥ ಪುಸ್ತಕದ ಆಮದಿನ ಮೇಲೆ ಇದ್ದ 36 ವರ್ಷಗಳ ನಿಷೇಧವನ್ನು ತೆಗೆದುಹಾಕಲಾಯಿದೆ ಎಂದು. ಕಾರಣ, ಅಂತಹದ್ದೊಂದು ನಿಷೇಧ ಎಂದಿಗೂ ಅಸ್ತಿತ್ವದಲ್ಲಿರಲಿಲ್ಲ ಎಂದು ಭಾವಿಸಲಾಗಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪುಸ್ತಕವನ್ನು ನಿಷೇಧಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿದಾರರು ಮನವಿ ಸಲ್ಲಿಸಿದ್ದರು. ಅರ್ಜಿದಾರರು ಮೂವರು ವ್ಯಕ್ತಿಗಳಾಗಿದ್ದು ಪುಸ್ತಕವು ಅಪಮಾನಕರವಾಗಿದ್ದು, ಧರ್ಮನಿಂದೆಯ ವಿಷಯವನ್ನು ಹೊಂದಿದೆ ಎಂದು ಪರಿಗಣಿಸುವಲ್ಲಿ ದೆಹಲಿ ಹೈಕೋರ್ಟ್ ವಿಫಲವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.

ಪುಸ್ತಕದಲ್ಲಿ ಪ್ರವಾದಿ ಮುಹಮ್ಮದ್ ಅವರನ್ನು "ಮಹೌಂಡ್" ಎಂದು ಉಲ್ಲೇಖಿಸಿದ್ದು, ಅವರ ಪತ್ನಿಯರನ್ನು ವೇಶ್ಯೆಯರಂತೆ ಚಿತ್ರಿಸಲಾಗಿದೆ. ಇಸ್ಲಾಮಿಕ್ ಇತಿಹಾಸವನ್ನು ಅಣಕಿಸುವ ಚಿತ್ರಣಗಳು ಅದರಲ್ಲಿವೆ. ಇಂತಹ ವಿಷಯಗಳು ಭಾರತದ 20 ಕೋಟಿಗೂ ಹೆಚ್ಚು ಮುಸ್ಲಿಮರ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತದೆ. ಇದು ಧಾರ್ಮಿಕ ಪ್ರಚೋದನೆ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಬಹುದು ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದರು.

ಇಷ್ಟೇ ಅಲ್ಲದೆ, ಹಿಂದೂ ದೇವರಾದ ಗಣೇಶನ ಬಗ್ಗೆ ಅವಹೇಳನಕಾರಿ ಉಲ್ಲೇಖಗಳನ್ನು ಸಹ ಅರ್ಜಿಯಲ್ಲಿ ಎತ್ತಿ ತೋರಿಸಲಾಗಿತ್ತು. ಇದು ಹಿಂದೂ ಧಾರ್ಮಿಕ ಭಾವನೆಗಳನ್ನು ಸಹ ಕೆರಳಿಸುತ್ತದೆ ಎಂದು ವಾದಿಸಲಾಗಿತ್ತು.

"ಪುಸ್ತಕವು ಕನಸಿನ ಸನ್ನಿವೇಶಗಳನ್ನು ಬಳಸಿಕೊಳ್ಳುತ್ತದೆ. ಅಲ್ಲಿನ ಪಾತ್ರಗಳು ಪ್ರವಾದಿಗಳು, ದೇವರುಗಳು ಮತ್ತು ಪವಿತ್ರ ವ್ಯಕ್ತಿಗಳನ್ನು ಹೋಲುತ್ತವೆ ಅಥವಾ ಸೂಚಿಸುತ್ತವೆ. ಗಣೇಶ-ಮುಖವಾಡದ ದೃಶ್ಯವನ್ನು ಹಿಂದೂ ದೇವರುಗಳ ಗೌರವಕ್ಕೆ ಧಕ್ಕೆ ಬರುವಂತೆ ನೇರವಾಗಿ ಮತ್ತು ಅಗೌರವದಿಂದ ಚಿತ್ರಿಸಲಾಗಿದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಸಂವಿಧಾನದ 19(2) ನೇ ವಿಧಿಯ ಅಡಿಯಲ್ಲಿ ವಾಕ್ ಸ್ವಾತಂತ್ರ್ಯವು ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ, ನೈತಿಕತೆ ಮತ್ತು ವಿದೇಶಾಂಗ ಸಂಬಂಧಗಳ ಹಿತಾಸಕ್ತಿಗಳಲ್ಲಿ ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ದುರುದ್ದೇಶಪೂರಿತ ಉದ್ದೇಶದಿಂದ ಧರ್ಮವನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವುದು ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸುವ ನೇರ ಪ್ರವೃತ್ತಿಯನ್ನು ಹೊಂದಿದೆ ಎಂದು ಹೇಳಿದ್ದ ಅರ್ಜಿದಾರರು ಪುಸ್ತಕದ ನಿಷೇಧಾರ್ಹವೆಂದು ಸಮರ್ಥಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಪುಸ್ತಕದ ಮಾರಾಟ, ವಿತರಣೆ ಮತ್ತು ಪ್ರಸರಣವನ್ನು ನಿರ್ಬಂಧಿಸುವಂತೆ ಅರ್ಜಿದಾರರು ಕೋರಿದ್ದರು. ಅದರೆ, ಈ ವಾದಗಳಿಗೆ ಮಣೆ ಹಾಕದ ಸುಪ್ರೀಂ ಕೋರ್ಟ್‌ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು.