Election 
ಸುದ್ದಿಗಳು

ಇವಿಎಂ ಬದಲಿಗೆ ಮತಪತ್ರ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಚಂದ್ರಬಾಬು ನಾಯ್ಡು ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಅವರಂತಹ ನಾಯಕರು ಇವಿಎಂ ತಿರುಚುವುದನ್ನು ಪ್ರಶ್ನಿಸಿದ್ದಾರೆ ಎಂಬ ಅರ್ಜಿದಾರರ ವಾದ ತೂಕದಿಂದ ಕೂಡಿಲ್ಲ ಎಂದು ಪೀಠ ತಿಳಿಸಿದೆ.

Bar & Bench

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಮತಪತ್ರ (ಬ್ಯಾಲೆಟ್ ಪೇಪರ್) ವ್ಯವಸ್ಥೆ ಮರುಜಾರಿಗೊಳಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಡಾ. ಕೆ ಎಸ್‌ ಪೌಲ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಚಂದ್ರಬಾಬು ನಾಯ್ಡು ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಅವರಂತಹ ನಾಯಕರು ವಿದ್ಯುನ್ಮಾನ ಮತಯಂತ್ರ (ಇವಿಎಂ) ತಿರುಚಿರುವುದನ್ನು ಪ್ರಶ್ನಿಸಿದ್ದಾರೆ ಎಂಬ ಅರ್ಜಿದಾರರ ವಾದ ತೂಕದಿಂದ ಕೂಡಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ ಬಿ ವರಾಳೆ ಅವರಿದ್ದ ಪೀಠ ತಿಳಿಸಿದೆ.

“ಚಂದ್ರಬಾಬು ನಾಯ್ಡು ಅಥವಾ  (ಜಗನ್‌ಮೋಹನ್‌ ) ರೆಡ್ಡಿ ಸೋತಾಗ ಇವಿಎಂ ತಿರುಚಲಾಗಿದೆ ಎನ್ನುತ್ತಾರೆ. ಗೆದ್ದಾಗ ಏನನ್ನೂ ಹೇಳುವುದಿಲ್ಲ. ಇದನ್ನು ಹೇಗೆ ಪರಿಗಣಿಸಲು ಸಾಧ್ಯ? ನಾವಿದನ್ನು ವಜಾಗೊಳಿಸುತ್ತಿದ್ದೇವೆ. ಇಂಥದ್ದನ್ನೆಲ್ಲಾ ವಾದಿಸುವ ಸ್ಥಳ ಇದಲ್ಲ” ಎಂದು ನ್ಯಾಯಾಲಯ ಸಿಡಿಮಿಡಿಗೊಂಡಿತು.

ಇವಿಎಂಗಳನ್ನು ತಿರುಚಬಹುದಾಗಿದ್ದು ಮತಪತ್ರಗಳನ್ನೇ ಬಳಸಿ ಚುನಾವಣೆ ನಡೆಸುವ ಅಮೆರಿಕದಂತಹ ದೇಶಗಳನ್ನು ಭಾರತ ಅನುಸರಿಸಬೇಕು ಎಂದು ಕೋರಿ ಧರ್ಮಬೋಧಕ ಡಾ. ಕೆ ಎ ಪೌಲ್ ಅವರು ಅರ್ಜಿ ಸಲ್ಲಿಸಿದ್ದರು. ಇವಿಎಂಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಅಮೆರಿಕದ ಖ್ಯಾತ ಉದ್ಯಮಿ ಇಲಾನ್‌ ಮಸ್ಕ್‌ ಅಂತಹವರೂ ಕೂಡ ಇವಿಎಂ ತಿರುಚುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದರು.

ಅಲ್ಲದೆ ,ಮತದಾರರಿಗೆ ಹಣ ಅಥವಾ ಮದ್ಯ ಹಂಚಿ ಸಿಕ್ಕಿಬೀಳುವ ಅಭ್ಯರ್ಥಿಯನ್ನು ಐದು ವರ್ಷಗಳ ಕಾಲ ಅನರ್ಹಗೊಳಿಸಬೇಕು ಮತ್ತು ಇದರ ನಿರ್ವಹಣೆಗೆ ಸಮಗ್ರ ನೀತಿ ಜಾರಿಗೆ ಬರಬೇಕು; ಚುನಾವಣೆಯಲ್ಲಿ ಪಾಲ್ಗೊಳ್ಳಲು ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು; ರಾಜಕೀಯ ಪಕ್ಷದ ನಿಧಿಯನ್ನು ಕೂಲಂಕಷವಾಗಿ ಪರಿಶೀಲಿಸಲು ತನಿಖಾ ವ್ಯವಸ್ಥೆ ಜಾರಿಗೆ ಬರಬೇಕು; ಚುನಾವಣಾ-ಸಂಬಂಧಿತ ಹಿಂಸಾಚಾರ ತಡೆಗಟ್ಟಲು ನೀತಿ ಚೌಕಟ್ಟು ರೂಪಿಸಬೇಕು ಎಂದು ಕೂಡ ಅರ್ಜಿ ಕೋರಿತ್ತು.