Supreme Court, Justice DY Chandrachud 
ಸುದ್ದಿಗಳು

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ನೇಮಕ ವಿರೋಧಿಸಿದ್ದ ಅರ್ಜಿ ವಜಾ

"ಅರ್ಜಿಯನ್ನು ಪರಿಗಣಿಸಬೇಕು ಎನ್ನುವುದಕ್ಕೆ ನಮಗೆ ಯಾವುದೇ ಕಾರಣ ದೊರೆಯುತ್ತಿಲ್ಲ. ಇಡೀ ಮನವಿ ಸಂಪೂರ್ಣ ತಪ್ಪು ಗ್ರಹಿಕೆಗಳಿಂದ ಕೂಡಿದೆ. ಹೀಗಾಗಿ ವಜಾಗೊಳಿಸಲಾಗುತ್ತಿದೆ" ಎಂದು ಆದೇಶಿಸಿದ ಪೀಠ.

Bar & Bench

ನ್ಯಾ. ಡಿ ವೈ ಚಂದ್ರಚೂಡ್‌ ಅವರನ್ನು ಸುಪ್ರೀಂ ಕೋರ್ಟಿನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ [ಮುರ್ಸಲಿನ್ ಅಸಿಜಿತ್ ಶೇಖ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಅರ್ಜಿಯ ಗ್ರಹಿಕೆ ಸಂಪೂರ್ಣ ತಪ್ಪು ಎಂದು ಸಿಜೆಐ ಯು ಯು ಲಲಿತ್, ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಹೇಳಿದೆ.

"ಅರ್ಜಿಯನ್ನು ಪರಿಗಣಿಸಬೇಕು ಎನ್ನುವುದಕ್ಕೆ ನಮಗೆ ಯಾವುದೇ ಕಾರಣ ದೊರೆಯುತ್ತಿಲ್ಲ. ಇಡೀ ಮನವಿ ಸಂಪೂರ್ಣ ತಪ್ಪು ಗ್ರಹಿಕೆಯಿಂದ ಕೂಡಿದೆ. ಹೀಗಾಗಿ ವಜಾಗೊಳಿಸಲಾಗುತ್ತಿದೆ" ಎಂದು ಪೀಠ ಆದೇಶಿಸಿದೆ.

ಸಿಜೆಐ ಲಲಿತ್ ಅವರ ಮುಂದೆ ತುರ್ತು ವಿಚಾರಣೆಗಾಗಿ ಪ್ರಸ್ತಾಪಿಸಿದ ನಂತರ ಇಂದು ಮಧ್ಯಾಹ್ನ 12.45ಕ್ಕೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಯಿತು.  ನ್ಯಾಯವಾದಿ ಮುರ್ಸಲಿನ್ ಅಸಿಜಿತ್ ಶೇಖ್ ಅವರು ಸಲ್ಲಿಸಿದ ಮನವಿಯಲ್ಲಿ, “ನ್ಯಾ. ಚಂದ್ರಚೂಡ್ ಅವರು ಹನ್ನೆರಡು ಸಂದರ್ಭಗಳಲ್ಲಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತಳೆದಿದ್ದು ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠಗಳು ಈ ಹಿಂದೆ ನೀಡಿದ್ದ ತೀರ್ಪುಗಳನ್ನ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಅರ್ಹ ದಾವೆದಾರರಿಗೆ ನ್ಯಾಯ  ನಿರಾಕರಿಸಿದ್ದಾರೆ" ಎಂದು ಆರೋಪಿಸಿದ್ದರು.

ನ್ಯಾ. ಚಂದ್ರಚೂಡ್ ಅವರು ವಕೀಲರಾಗಿರುವ ತಮ್ಮ ಮಗನ ಕಕ್ಷಿದಾರರಿಗೆ ಸಂಬಂಧಿಸಿದ ಪ್ರಕರಣವನ್ನು ಕೈಗೆತ್ತಿಕೊಂಡು ರಾಜ್ಯ ಸರ್ಕಾರ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ನೀಡದೆ ಏಕ ಪಕ್ಷೀಯ ಆದೇಶ ಜಾರಿಗೊಳಿಸಿದ್ದರು ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು.

ಎರಡನೇ ಸಂಗತಿಯ ಬಗ್ಗೆ ಆರ್‌ ಕೆ ಪಠಾಣ್ ಎಂಬುವವರು ಸಿಜೆಐ ಮತ್ತು ರಾಷ್ಟ್ರಪತಿಗಳಿಗೆ ಈಗಾಗಲೇ ದೂರು ನೀಡಿ ಗಮನ ಸೆಳೆದಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿತ್ತು.

ನ್ಯಾಯಮೂರ್ತಿ ಚಂದ್ರಚೂಡ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮತ್ತಿತರ ಕ್ರಿಮಿನಲ್ ಕ್ರಮಗಳನ್ನು ಜರುಗಿಸಬೇಕು. ಜೊತೆಗೆ, ಅವರನ್ನು ಸಿಜೆಐ ಆಗಿ ನೇಮಕ ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ವಿನಂತಿಸಿದ್ದರು.

ಆದರೆ ನ್ಯಾಯಮೂರ್ತಿಗಳು ನೀಡಿದ ಆದೇಶಗಳು ಅವರ ನೇಮಕಾತಿ ಪ್ರಶ್ನಿಸಲು ಆಧಾರವಾಗದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. “ನೀವಿಲ್ಲಿ ಇಂತಹ ಅಂಶಗಳನ್ನು ವಾದಿಸುವಂತಿಲ್ಲ” ಎಂದು ನ್ಯಾ. ಭಟ್‌ ತಿಳಿಸಿದರು. ಈ ಮೂಲಕ ಪೀಠ ಅರ್ಜಿಯನ್ನು ವಜಾಗೊಳಿಸಿತು.