CBSE & ICSE Exam 
ಸುದ್ದಿಗಳು

ಸಿಬಿಎಸ್ಇ, ಐಸಿಎಸ್ಇ 12ನೇ ತರಗತಿ ಪರೀಕ್ಷೆ ರದ್ದತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

"ಸಿಬಿಎಸ್ಇ ಮತ್ತು ಐಸಿಎಸ್ಇ ಪ್ರಸ್ತಾಪಿಸಿದ ನೀತಿಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನಾವು ಭಾವಿಸುತ್ತೇವೆ. ಇದು ಎಲ್ಲಾ ವಿದ್ಯಾರ್ಥಿಗಳ ಕಾಳಜಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ" ಎಂದಿದೆ ಪೀಠ.

Bar & Bench

ಸಿಬಿಎಸ್‌ಇ ಐಸಿಎಸ್‌ಇ 12ನೇ ತರಗತಿ ಪರೀಕ್ಷೆ ರದ್ದತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಜಾಗೊಳಿಸಿರುವ ಸುಪ್ರೀಂಕೋರ್ಟ್‌ ಮಂಡಳಿಯ ಈಗಿನ ಮೌಲ್ಯಮಾಪನ ನೀತಿಯನ್ನು ಎತ್ತಿಹಿಡಿದಿದೆ. ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ಪೀಠ

"ಸಿಬಿಎಸ್ಇ ಮತ್ತು ಐಸಿಎಸ್ಇ ಪ್ರಸ್ತಾಪಿಸಿದ ನೀತಿಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನಾವು ಭಾವಿಸುತ್ತೇವೆ. ಇದು ಎಲ್ಲಾ ವಿದ್ಯಾರ್ಥಿಗಳ ಕಾಳಜಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಬೃಹತ್‌ ಸಾರ್ವಜನಿಕ ಹಿತಾಸಕ್ತಿ, ವಿದ್ಯಾರ್ಥಿಗಳ ಸುರಕ್ಷತೆ ಮತ್ತಿತರ ವ್ಯವಸ್ಥಾಪನಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಂಡಳಿಗಳು ಮತ್ತು ಸರ್ಕಾರ ಸುಧಾರಿತ ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿವೆ. ನಾವು ಈ ವಿಚಾರವಾಗಿ ಮಧ್ಯಪ್ರವೇಶಿಸಿ ತೀರ್ಪು ನೀಡಲು ಹೋಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರ ಅನ್ಶುಲ್ ಗುಪ್ತಾ ಅವರು ಐಐಟಿ-ಜೆಇಇ ಅಥವಾ ಸಿಎಲ್‌ಎಟಿ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾದರೆ, ಬೋರ್ಡ್ ಪರೀಕ್ಷೆಗಳನ್ನು ಏಕೆ ಇದೇ ಮಾದರಿಯಲ್ಲಿ ನಡೆಸಬಾರದು ಎಂದು ವಾದಿಸಿದ್ದರು.

"ಪ್ರತಿಯೊಂದು ಮಂಡಳಿಯು ವಿಭಿನ್ನವಾಗಿದ್ದು ವ್ಯವಸ್ಥಾಪನಾ ಅಗತ್ಯತೆಗಳು ವಿಭಿನ್ನವಾಗಿವೆ. ಪ್ರತಿ ಪರೀಕ್ಷೆಯು ಸ್ವತಂತ್ರ ಪರೀಕ್ಷೆಯಾಗಿದೆ. ಮಂಡಳಿಯು ಆ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಿದೆ" ಎಂದು ನ್ಯಾ. ಖಾನ್ವಿಲ್ಕರ್ ಹೇಳಿದರು.

"ವೈಯಕ್ತಿಕ ಗ್ರಹಿಕೆ ಈ ಪ್ರಕರಣವನ್ನು ನಿರ್ಧರಿಸುವುದಿಲ್ಲ. ದೊಡ್ಡ ಆಸಕ್ತಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ, ವ್ಯವಸ್ಥಾಪನಾ ಸಮಸ್ಯೆಗಳು, ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿ ಬಗೆಗೆ ಸಮಸ್ಯೆಗಳಿವೆ" ಎಂದು ನ್ಯಾ.ಮಹೇಶ್ವರಿ ತಿಳಿಸಿದರು. ಇಂತಹ ಅನೇಕ ಅವಲೋಕನದೊಂದಿಗೆ ಪೀಠ ಅರ್ಜಿಯನ್ನು ವಜಾಗೊಳಿಸಿತು.