Quran and Supreme Court 
ಸುದ್ದಿಗಳು

ಕುರಾನ್‌ನಲ್ಲಿ ನಿರ್ದಿಷ್ಟ ಪಂಕ್ತಿಗಳನ್ನು ತೆಗೆಯುವ ಕೋರಿಕೆ ವಜಾಗೊಳಿಸಿದ ಸುಪ್ರೀಂ; ಅರ್ಜಿದಾರರಿಗೆ ₹50 ಸಾವಿರ ದಂಡ ‌

ಕುರಾನ್‌ನಲ್ಲಿ ಆಯ್ದ ಪಂಕ್ತಿಗಳು ಉಗ್ರವಾದ ಪ್ರಚಾರ ಮಾಡುವುದಲ್ಲದೇ ನೆಲದ ಕಾನೂನಿಗೆ ವಿರುದ್ಧವಾಗಿರುವುದರಿಂದ ಅವುಗಳನ್ನು ತೆಗೆಯುವಂತೆ ಉತ್ತರ ಪ್ರದೇಶದ ಶಿಯಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ಸಯದ್‌ ವಸೀಮ್‌ ರಿಜ್ವಿ ಕೋರಿಕೆ ಸಲ್ಲಿಸಿದ್ದರು.

Bar & Bench

ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್‌‌ನಲ್ಲಿನ ಆಯ್ದ ಪಂಕ್ತಿಗಳು ನೆಲದ ಕಾನೂನಿಗೆ ವಿರುದ್ಧವಾಗಿವೆ. ಅಲ್ಲದೇ ಅವುಗಳು ಉಗ್ರವಾದವನ್ನು ಪ್ರಚಾರ ಮಾಡುತ್ತವೆ. ಹೀಗಾಗಿ ಅವುಗಳನ್ನು ತೆಗೆದು ಹಾಕುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು (ಪಿಐಎಲ್‌) ಸೋಮವಾರ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ (ಸಯದ್‌ ವಸೀಮ್‌ ರಿಜ್ವಿ ವರ್ಸಸ್‌ ಭಾರತ ಸರ್ಕಾರ).

ನ್ಯಾಯಮೂರ್ತಿಗಳಾದ ರೋಹಿಂಟನ್‌ ಫಾಲಿ ನಾರಿಮನ್‌, ಬಿ ಆರ್‌ ಗವಾಯಿ ಮತ್ತು ಹೃಷಿಕೇಷ್‌ ರಾಯ್‌ ಅವರಿದ್ದ ತ್ರಿಸದಸ್ಯ ಪೀಠವು ಅರ್ಜಿದಾರರಾದ ಶಿಯಾ ಕೇಂದ್ರ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ಸಯದ್ ವಸೀಮ್‌ ರಿಜ್ವಿ ಅವರಿಗೆ 50,000 ರೂಪಾಯಿ ದಂಡವನ್ನೂ ವಿಧಿಸಿದೆ. ಕುರಾನ್‌ನಲ್ಲಿ ಇರುವ ಕೆಲವು ಪಂಕ್ತಿಗಳು ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಏಕತೆಗೆ ಧಕ್ಕೆ ಉಂಟು ಮಾಡುವಂತಿವೆ ಎಂದು ರಿಜ್ವಿ ಮನವಿಯಲ್ಲಿ ತಿಳಿಸಿದ್ದರು. ಅಲ್ಲದೇ, ಆಕ್ಷೇಪಾರ್ಹವಾದ ಪಂಕ್ತಿಗಳು ಅಸಾಂವಿಧಾನಿಕ, ಪರಿಣಾಮರಹಿತ ಮತ್ತು ಕ್ರಿಯಾರಹಿತ ಎಂದು ಘೋಷಿಸುವಂತೆ ಕೋರಿದ್ದರು.

ಅರ್ಜಿಗೆ ಸಂಬಂಧಿಸಿದಂತೆ ವಿಷಯ ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಲು ಧಾರ್ಮಿಕ ತಜ್ಞರ ಸಮಿತಿ ರಚಿಸುವ ಕುರಿತು ನಿರ್ದೇಶನ ನೀಡುವಂತೆಯೂ ಮನವಿಯಲ್ಲಿ ಕೋರಲಾಗಿತ್ತು. ಅಖಿಲ ಭಾರತ ಶಿಯಾ ಯತೀಮ್‌ ಖಾನಾ ಅಧ್ಯಕ್ಷರೂ ಆದ ರಿಜ್ವಿ ಅವರು ಕುರಾನ್‌ನಲ್ಲಿ ಬರೆಯಲಾಗಿರುವ ದೈವ ಅಲ್ಲಾನ ಕೆಲವು ಸಂದೇಶಗಳು ನಕಾರಾತ್ಮಕವಾಗಿದ್ದು, ದೌರ್ಜನ್ಯ ಮತ್ತು ದ್ವೇಷಕ್ಕೆ ಇಂಬು ನೀಡುವಂತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದರು.

ಅರ್ಜಿಯ ಪ್ರಕಾರ ಐದನೇ ಅಧ್ಯಾಯದಲ್ಲಿರುವ 9ನೇ ಪಂಕ್ತಿಯು ನಕಾರಾತ್ಮಕವಾಗಿದ್ದು, ದೌರ್ಜನ್ಯ ಮತ್ತು ದ್ವೇಷಕ್ಕೆ ಇಂಬು ನೀಡುತ್ತದೆ ಎಂದು ಹೇಳಲಾಗಿದೆ. “ಪವಿತ್ರ ತಿಂಗಳುಗಳು ಕಳೆದ ನಂತರ ಒಪ್ಪಂದಗಳನ್ನು ಉಲ್ಲಂಘಿಸಿದ ಬಹುದೇವತಾವಾದಿಗಳನ್ನು ನೀವು ಎಲ್ಲಿ ಕಂಡರೂ ಅವರನ್ನು ಕೊಂದು ಬಿಡಿ. ಅವರನ್ನು ಸೆರೆಹಿಡಿಯಿರಿ, ಮುತ್ತಿಗೆ ಹಾಕಿ, ಮತ್ತು ಎಲ್ಲ ಹಾದಿಯಲ್ಲಿಯೂ ಅವರಿಗಾಗಿ ಕಾಯುತ್ತಿರಿ. ಆದರೆ ಅವರು ಪಶ್ಚಾತ್ತಾಪಪಟ್ಟರೆ, ಪ್ರಾರ್ಥನೆ ಮಾಡಿದರೆ ಮತ್ತು ದಾನಗಳನ್ನು ನೀಡಿದರೆ, ಅವರನ್ನು ಮುಕ್ತಗೊಳಿಸಿ. ನಿಜಕ್ಕೂ ಕರುಣಾಮಯಿಯಾದ ಅಲ್ಲಾಹನು ಕ್ಷಮಿಸುವನು” ಎಂದು ಹೇಳಲಾಗಿದೆ ಎಂದು ರಿಜ್ವಿ ಮನವಿಯಲ್ಲಿ ಉಲ್ಲೇಖಿಸಿದ್ದರು.

ಕುರಾನ್‌‌ನ 42(1)ರಲ್ಲಿ ಎ ಯಿಂದ ಇ) ವರೆಗೆ ಎಲ್ಲ ಮಾನವರಿಗೂ ಸಂದೇಶವಿದ್ದು, ನೀವುಗಳು ಕಚ್ಚಾಡಬೇಡಿ. ಒಬ್ಬರ ಮೇಲೆ ಒಬ್ಬರು ಜಗಳ ಮಾಡಬೇಡಿ. ಯಾರನ್ನೂ ಕೊಲೆ ಮಾಡಬೇಡಿ. ಇತರೆ ಧರ್ಮದ ಅನುಯಾಯಿಗಳ ವಿರುದ್ಧ ನಿಲುವು ತಳೆಯಬೇಡಿ ಎಂದಿದೆ. ಕುರಾನ್‌‌ನ 109.1ರಲ್ಲಿ ಬೋಧಿಸಿರುವಂತೆ ಅಲ್ಲಾಹು ಅವರು ನಿಮಗೆ ನಿಮ್ಮ ಧರ್ಮ, ನ ಮಗೆ ನಮ್ಮ ಧರ್ಮ ಎಂದಿದ್ದಾರೆ. ಇದು ಕುರಾನ್‌ನ ಮೂಲತತ್ವವಾಗಿದ್ದು, ವಿವಿಧ ಧಾರ್ಮಿಕ ಹಿನ್ನೆಲೆ ಹೊಂದಿದ್ದರೂ ಸಹಿಷ್ಣುತೆ ಮತ್ತು ಸೋದರತ್ವವನ್ನು ಇಸ್ಲಾಂ ಮೈಗೂಡಿಸಿಕೊಂಡಿದೆ" ಎಂದು ರಿಜ್ವಿ ವಾದಿಸಿದ್ದರು.

ಮೇಲೆ ಹೇಳಲಾದ ಪಂಕ್ತಿಯನ್ನು ವ್ಯಾಖ್ಯಾನಿಸುವ ಮೂಲಕ ಇಡೀ ಪ್ರಪಂಚಾದ್ಯಂತ ಮುಸ್ಲಿಮ್‌ ಸಮುದಾಯವನ್ನು ದೂಷಿಸಲಾಗುತ್ತಿದೆ. ಪವಿತ್ರ ಗ್ರಂಥವಾದ ಕುರಾನ್‌‌ ಸಾಧಿಸಲು ಉದ್ದೇಶಿಸಿರುವುದಕ್ಕೂ ಇದಕ್ಕೂ ಯಾವುದೇ ಆಧಾರ ಅಥವಾ ಸಂಬಂಧ ಇಲ್ಲ ಎಂದು ಮನವಿಯಲ್ಲಿ ಹೇಳಲಾಗಿತ್ತು.