ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ತಮ್ಮ ಶಿಕ್ಷೆಯ ಕಡಿತವನ್ನು ರದ್ದುಗೊಳಿಸಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ [ಗುಜರಾತ್ ರಾಜ್ಯ ವರ್ಸಸ್ ಬಿಲ್ಕಿಸ್ ಯಾಕೂಬ್ ರಸೂಲ್ ಮತ್ತು ಇತರರು].
ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಶಿಕ್ಷೆ ಕಡಿತವನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಹಾಗೂ ಅಪರಾಧಿಗಳು ಸಲ್ಲಿಸಿದ ಮರುಪರಿಶೀಲನಾ ಅರ್ಜಿಗಳನ್ನು ಗುರುವಾರ ವಜಾಗೊಳಿಸಿತು. ಪ್ರಕರಣದ ಹನ್ನೊಂದು ಅಪರಾಧಿಗಳ ಶಿಕ್ಷೆಯನ್ನು ಕಡಿತಗೊಳಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಜನವರಿ 8ರ ತೀರ್ಪನ್ನು ಪ್ರಶ್ನಿಸಿತ್ತು.
ಜನವರಿ 8ರ ತನ್ನ ತೀರ್ಪಿನಲ್ಲಿ ನ್ಯಾಯಾಲಯವು ತನ್ನ ವಿರುದ್ಧ ಮಾಡಿದ ಪ್ರತಿಕೂಲ ಹೇಳಿಕೆಗಳಿಗೆ ಮಾತ್ರ ರಾಜ್ಯದ ಸವಾಲು ಸೀಮಿತವಾಗಿತ್ತು. "ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪರಿಶೀಲನಾ ಅರ್ಜಿಗಳು ಹಾಗೂ ಅದಕ್ಕೆ ಪೂರಕವಾಗಿ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ನಂತರ ಆದೇಶವನ್ನು ಮರುಪರಿಶೀಲಿಸಲು ಅಗತ್ಯವಾದ ಯಾವುದೇ ಅರ್ಹತೆಗಳನ್ನು ಮರುಪರಿಶೀಲನಾ ಅರ್ಜಿಯಲ್ಲಿ ಕಂಡುಬಂದಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಿದ್ದನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಜನವರಿ 8ರಂದು ನೀಡಿದ ತೀರ್ಪಿನ ವಿರುದ್ಧ ಗುಜರಾತ್ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು.
ತೀರ್ಪಿನಲ್ಲಿ ಗುಜರಾತ್ ಸರ್ಕಾರದ ವಿರುದ್ಧ ಮಾಡಲಾದ ಟೀಕೆಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಗುಜರಾತ್ ಸರ್ಕಾರ ಇಂತಹ ಅವಲೋಕನಗಳಿಗೆ ಸಂಬಂಧಿಸಿದಂತೆ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೋರಿತ್ತು.
ಅಪರಾಧಿಗಳೊಂದಿಗೆ ಗುಜರಾತ್ ಸರ್ಕಾರ ಶಾಮೀಲಾಗಿ ಕಾರ್ಯ ನಿರ್ವಹಿಸಿತ್ತು ಎಂಬ ಸುಪ್ರೀಂ ಕೋರ್ಟ್‌ನ ಅವಲೋಕನ ರಾಜ್ಯ ಸರ್ಕಾರದ ಬಗ್ಗೆ ಪೂರ್ವಾಗ್ರಹ ಮೂಡಿಸುತ್ತದೆ ಎಂದು ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ವಾದಿಸಲಾಗಿತ್ತು.