ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್‌
ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್‌ 
ಸುದ್ದಿಗಳು

ಚುನಾವಣಾ ಬಾಂಡ್‌: ಎಸ್‌ಬಿಐ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್; ನಾಳೆಯೊಳಗೆ ಮಾಹಿತಿ ಸಲ್ಲಿಸುವಂತೆ ತಾಕೀತು

Bar & Bench

ಏಪ್ರಿಲ್‌ 2019ರಿಂದ ಇಲ್ಲಿಯವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಒದಗಿಸಲು ವಿಧಿಸಲಾಗಿರುವ ಗಡುವನ್ನು ಜೂನ್ 30ರವರೆಗೆ ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ನಾಳೆಯೊಳಗೆ (ಮಾರ್ಚ್ 12) ವಿವರ ಬಹಿರಂಗಪಡಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ಸದಸ್ಯರ ಪೀಠ ತಿಳಿಸಿದೆ.

ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ, ಸಂಜೀವ್ ಖನ್ನಾ, ಸಿಜೆಐ ಡಿ ವೈ ಚಂದ್ರಚೂಡ್, ಬಿ ಆರ್ ಗವಾಯಿ, ಮನೋಜ್ ಮಿಶ್ರಾ

ನ್ಯಾಯಾಲಯದ ನಿರ್ದೇಶನ ಪಾಲನೆಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಮಾರ್ಚ್ 6ರ ಗಡುವಿನ ಬದಲು ಜೂನ್ 30 ರವರೆಗೆ ಕಾಲಮಿತಿ ವಿಸ್ತರಿಸುವಂತೆ ಕೋರಿ ಎಸ್‌ಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಕೇಳಲಾಗಿರುವ ಮಾಹಿತಿ ಸುಲಭವಾಗಿ ದೊರೆಯುವಂತೆ ತೋರುತ್ತಿದೆ. ಹೀಗಾಗಿ ಜೂನ್ 30 ರವರೆಗೆ ಕಾಲಾವಧಿ ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿರುವ ಅರ್ಜಿ ವಜಾಗೊಳಿಸಲಾಗಿದೆ. ಮಾರ್ಚ್ 12, 2024ರ ಕಚೇರಿ ವ್ಯವಹಾರದ ಅವಧಿ ಮುಗಿಯುವುದರೊಳಗೆ ವಿವರ ಬಹಿರಂಗಪಡಿಸುವಂತೆ ಎಸ್‌ಬಿಐಗೆ ನಿರ್ದೇಶನ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ತನ್ನ ಸೂಚನೆ ಪಾಲಿಸಲು ವಿಫಲವಾದರೆ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗುವುದು ಎಂದು ಕೂಡ ಪೀಠ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ.

ಚುನಾವಣಾ ಬಾಂಡ್‌ ಯೋಜನೆಯ ಪ್ರಕಾರ, ಕೇಳಿದಾಗ ಎಸ್‌ಬಿಐ ಮಾಹಿತಿ ಬಹಿರಂಗಪಡಿಸುವುದು ಕಡ್ಡಾಯ. ಇದಲ್ಲದೆ, ಬಹಿರಂಗಪಡಿಸಬೇಕಾದ ವಿವರಗಳು ಎಸ್‌ಬಿಐನಲ್ಲಿ ಸುಲಭವಾಗಿ ದೊರೆಯುವಂತಹವು ಎಂದು ನ್ಯಾಯಾಲಯ ಹೇಳಿದೆ.

"ರಾಜಕೀಯ ಪಕ್ಷದ ಚಾಲ್ತಿ ಖಾತೆ ಕೇವಲ 4 ಅಧಿಕೃತ ಶಾಖೆಗಳಲ್ಲಿ ಮಾತ್ರ ಇವೆ. ಹೀಗಾಗಿ, ಪಕ್ಷಗಳು ನಗದೀಕರಿಸಿದ ಚುನಾವಣಾ ಬಾಂಡ್‌ ಮಾಹಿತಿಯ ವಿವರಗಳು ಈ 4 ಶಾಖೆಗಳಲ್ಲಿ ಲಭ್ಯವಿದ್ದು ದಾಖಲೆ ಇತ್ಯಾದಿಗಳು ಮುಖ್ಯ ಬ್ಯಾಂಕಿನಲ್ಲಿ ಠೇವಣಿ ಇಡಬೇಕಾಗಿದೆ. ಈ ಪ್ರಕ್ರಿಯೆಯನ್ನು ಪಾಲಿಸಲಾಗಿದೆ" ಎಂದು ಮನವಿ ತಿರಸ್ಕರಿಸುವಾಗ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ದಾನಿಗಳ ಗುರುತನ್ನು ಅನಾಮಧೇಯವಾಗಿಡುವುದಕ್ಕಾಗಿ ಕೈಗೊಂಡ ಕಠಿಣ ಕ್ರಮಗಳಿಂದಾಗಿ, ಚುನಾವಣಾ ಬಾಂಡ್‌ ವಿವರ ಬಹಿರಂಗಪಡಿಸುವ ಪ್ರಕ್ರಿಯೆ ಸಂಕೀರ್ಣಮಯವಾಗಿದೆ. ವಿವಿಧ ಬ್ಯಾಂಕ್‌ ಶಾಖೆಗಳಲ್ಲಿ ಬಾಂಡ್‌ಗಳನ್ನು ಖರೀದಿಸಲಾಗಿದ್ದು ಅವುಗಳ ವಿವರಗಳನ್ನು ಒಂದು ಸ್ಥಳದಲ್ಲಿ ಕೇಂದ್ರೀಯವಾಗಿ ನಿರ್ವಹಿಸಿಲ್ಲ. ದಾನಿಗಳ ಅನಾಮಧೇಯತೆ ಉಳಿಸಿಕೊಳ್ಳುವುದಕ್ಕಾಗಿ ಎರಡು ಭಿನ್ನ ಸೈಲೋಗಳಲ್ಲಿ ದಾಖಲಿಸಲಾಗಿದೆ ಎಂಬ ಎಸ್‌ಬಿಐ ವಾದವನ್ನು ನ್ಯಾಯಾಲಯ ಇದೇ ವೇಳೆ ತಿರಸ್ಕರಿಸಿತು.