ಸುದ್ದಿಗಳು

ಸಿಜೆಐ ಲಲಿತ್ ನೇತೃತ್ವದಲ್ಲಿ 13 ದಿನಗಳಲ್ಲಿ 5,000ಕ್ಕೂ ಹೆಚ್ಚು ಪ್ರಕರಣ ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್‌

Bar & Bench

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ  (ಸಿಜೆಐ) ಯು ಯು ಲಲಿತ್ ಅವರು ಅಧಿಕಾರ ವಹಿಸಿಕೊಂಡ 13 ದಿನಗಳ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಒಟ್ಟು 5,113 ಪ್ರಕರಣಗಳನ್ನು ವಿಲೇವಾರಿ ಮಾಡಿದೆ.

ನ್ಯಾ. ಲಲಿತ್ ಅವರು ಪ್ರಕರಣಗಳ ಪಟ್ಟಿ ಮಾಡುವ ಹೊಸ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ ನಂತರ ಕಳೆದ 13 ದಿನಗಳಲ್ಲಿ 3,618 ವಿವಿಧ ಪ್ರಕರಣಗಳು, 283 ಸಾಮಾನ್ಯ ವಿಚಾರಣೆಯ ಪ್ರಕರಣಗಳು ಹಾಗೂ 1,212 ವರ್ಗಾವಣೆ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ವಿಲೇವಾರಿ ಮಾಡಿದೆ ಎಂದು ʼಬಾರ್ & ಬೆಂಚ್ʼಗೆ ತಿಳಿದು ಬಂದಿದೆ.

Supreme Court of India Cases Disposal

ಆಗಸ್ಟ್ 29 ರಿಂದ ಇಂದಿನವರೆಗೆ ಒಟ್ಟು 1,135 ಪ್ರಕರಣಗಳನ್ನು ದಾಖಲಿಸಲಾಗಿದ್ದು 875 ಪ್ರಕರಣಗಳನ್ನು ಮರುಹೊಂದಿಸಲಾಗಿದೆ. 797 ಪ್ರಕರಣಗಳನ್ನು ದಾಖಲಿಸಲಾಗಿದ್ದು 981 ಪ್ರಕರಣಗಳನ್ನು ಪರಿಶೀಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ದಾಖಲೆ ವಿವರಿಸುತ್ತದೆ.

ಸಿಜೆಐ ಲಲಿತ್ ಅವರು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನಂತರ ಪರಿಚಯಿಸಿದ ಮೊದಲ ಬದಲಾವಣೆಯೆಂದರೆ, ನಾನ್‌ ಮಿಸಲೇನಿಯಸ್‌ ದಿನಗಳಲ್ಲಿ ಕೂಡ ಪ್ರಕರಣಗಳ ವಿಚಾರಣೆ ನಡೆಸುತ್ತಿರುವುದು. ಅದರಂತೆ ನಾನ್‌ ಮಿಸಲೇನಿಯಸ್‌ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಪ್ರಸ್ತುತ ಬೆಳಗಿನ ಅಧಿವೇಶನದಲ್ಲಿ (10.30 ರಿಂದ ಮಧ್ಯಾಹ್ನ 1) ಸಾಮಾನ್ಯ ಪ್ರಕರಣಗಳನ್ನು ಮತ್ತು ಮಧ್ಯಾಹ್ನದ ಅಧಿವೇಶನದಲ್ಲಿ (ಮಧ್ಯಾಹ್ನ 2 ರಿಂದ 4 ರವರೆಗೆ) ಮಿಸಲೇನಿಯಸ್‌ ಹಾಗೂ ಆಫ್ಟರ್‌ ನೋಟಿಸ್‌ ಪ್ರಕರಣಗಳನ್ನು ಆಲಿಸುತ್ತಿದೆ.  ಈ ಮೊದಲು ಮಿಸಲೇನಿಯಸ್‌ ಪ್ರಕರಣಗಳನ್ನು ವಿಚಾರಣೆ ನಡೆಸಿ ಬಳಿಕ ನಾನ್‌ ಮಿಸಿಲೇನಿಯಸ್‌ ಪ್ರಕರಣಗಳ ವಿಚಾರಣೆ ನಡೆಸುವುದು ರೂಢಿಯಾಗಿತ್ತು.

ತಮಗೆ ಇರುವ 74 ದಿನಗಳ ಅಧಿಕಾರಾವಧಿಯಲ್ಲಿ ಪ್ರಕರಣಗಳ ಪಟ್ಟಿ, ತುರ್ತು ಪ್ರಕರಣಗಳ ಪ್ರಸ್ತಾಪ ಹಾಗೂ ಸಾಂವಿಧಾನಿಕ ಪೀಠಗಳ ಬಗ್ಗೆ ಗಮನ ಹರಿಸುವುದಾಗಿ ಈ ಹಿಂದೆ ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನ್ಯಾ. ಲಲಿತ್‌ ತಿಳಿಸಿದ್ದರು.