ಸುಪ್ರೀಂಕೋರ್ಟ್ ಇ ಸಮಿತಿ ಇ-ನ್ಯಾಯಾಲಯ ಸೇವೆಗಳಿಗಾಗಿ ಹದಿನಾಲ್ಕು ಭಾಷೆಗಳಲ್ಲಿ ರೂಪಿಸಿದ್ದ ಉಚಿತ ಮೊಬೈಲ್ ಆ್ಯಪ್ ಕುರಿತ ಕೈಪಿಡಿ ಬಿಡುಗಡೆ ಯಾಗಿದೆ.
ಮೊಬೈಲ್ ಆ್ಯಪ್ ಇದುವರೆಗೆ 57 ಲಕ್ಷ ಡೌನ್‌ಲೋಡ್ ಕಂಡಿದ್ದು ಕೈಪಿಡಿ ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, , ಖಾಸಿ, ಮಲಯಾಳಂ, ಮರಾಠಿ, ನೇಪಾಳಿ ಮತ್ತು ಒಡಿಯಾ, ಪಂಜಾಬಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಲಭ್ಯವಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹಾಗೂ ಸರ್ವೋಚ್ಚ ನ್ಯಾಯಾಲಯ ಇ ಸಮಿತಿ ಅಧ್ಯಕ್ಷರಾಗಿರುವ ಡಾ. ಡಿ ವೈ ಚಂದ್ರಚೂಡ್ ಆ್ಯಪ್ನ ಕೈಪಿಡಿ ಬಿಡುಗಡೆ ಮಾಡಿದ್ದು ಅದರ ಮುನ್ನುಡಿಯಲ್ಲಿ ಅವರು ಆ್ಯಪ್ ಮಹತ್ವ ಮತ್ತು ವ್ಯಾಪ್ತಿ ಮತ್ತು ಉಪಯುಕ್ತತೆ ಕುರಿತು ವಿವರಿಸಿದ್ದಾರೆ.
“ದೂರದಿಂದಲೇ ಕೆಲಸ ನಿರ್ವಹಿಸುತ್ತಾ ಕಾನೂನು ವೃತ್ತಿ ಅಭ್ಯಾಸ ಮಾಡಲು, ತೊಡಗಿಕೊಳ್ಳಲು ವರ್ಚುವಲ್ ನ್ಯಾಯಾಲಯಗಳು, ಡಿಜಿಟಲ್ ಕಾರ್ಯಾವಕಾಶಗಳು ಹಾಗೂ ಎಲೆಕ್ಟ್ರಾನಿಕ್ ಪ್ರಕರಣ ನಿರ್ವಹಣೆ ಏಕತ್ರಗೊಂಡಿವೆ. ತಂತ್ರಜ್ಞಾನವನ್ನು ಕೇವಲ ಮಧ್ಯಂತರ ಸಾಧನವಾಗಿ ಸ್ವೀಕರಿಸದೆ ನಮ್ಮ ಕಾನೂನು ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ಅಂತರ್ಗತಗೊಳಿಸಲು ಕೈಗೆಟಕುವಂತೆ ಮಾಡಲು, ಪರಿಸರ ಸುಸ್ಥಿರತೆ ಕಾಯ್ದುಕೊಳ್ಳಲು ಇದು ನಮಗೆ ಅಪರೂಪದ ಅವಕಾಶ ನೀಡಿದೆ. ಇ ಕೋರ್ಟ್ಸ್ ಸರ್ವೀಸಸ್ ಮೊಬೈಲ್ ಅಪ್ಲಿಕೇಷನ್ ಈ ನಿಟ್ಟಿನಲ್ಲಿ ಇರಿಸಿದ ಒಂದು ಹೆಜ್ಜೆ” ಎಂದು ಅವರು ಬಣ್ಣಿಸಿದ್ದಾರೆ.
ಕೈಪಿಡಿಯನ್ನು ಇಂಗ್ಲಿಷ್‌ನಿಂದ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲಾಗಿದೆ. ಸಂಬಂಧಪಟ್ಟ ಹೈಕೋರ್ಟ್‌ಗಳ ಕೇಂದ್ರ ಯೋಜನಾ ಸಂಯೋಜಕರ ನೇತೃತ್ವದಲ್ಲಿ ವಿವಿಧ ಹೈಕೋರ್ಟ್‌ಗಳ ಮಾಸ್ಟರ್ ಟ್ರೈನರ್‌ಗಳನ್ನು (ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿ) ಒಳಗೊಂಡ ಇ- ಸಮಿತಿಯ ಆಂತರಿಕ ಮಾನವ ಸಂಪನ್ಮೂಲ ತಂಡ ಅನುವಾದ ಕಾರ್ಯದಲ್ಲಿ ತೊಡಗಿತ್ತು.
ನ್ಯಾಯಾಂಗ ಇಲಾಖೆಯ ಕಾರ್ಯದರ್ಶಿ ಬರುನ್ ಮಿತ್ರಾ ಅವರು "ವಕೀಲರು ಪ್ರಕರಣದ ಮಾಹಿತಿ ನಿರ್ವಹಣೆ, ದಾಖಲೆ ಸಂಗ್ರಹ, ವೇಳಾಪಟ್ಟಿ, ಪ್ರಕರಣದ ಸ್ಥಿತಿಗತಿಯ ಟೈಂ ಟ್ರ್ಯಾಕಿಂಗ್, ತೀರ್ಪಿನ ಮಾಹಿತಿ ಪಡೆಯುವಿಕೆ, ಅನುಸರಣಾ ಅಗತ್ಯಗಳಿಗಾಗಿ ಇಸಿಎಂಟಿ ಸಾಧನ ಅನುವು ಮಾಡಿಕೊಡುತ್ತದೆ” ಎಂದು ಹೇಳಿದ್ದಾರೆ.
ಮೊಬೈಲ್ ಅಪ್ಲಿಕೇಶನ್ ಮತ್ತು ಕೈಪಿಡಿ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದ್ದು ಇ-ಸಮಿತಿಯ ಅಧಿಕೃತ ಜಾಲತಾಣದಿಂದ ಉಚಿತವಾಗಿ ಡೌನ್‌ಲೋಡ್ ಮಾಡಬಹುದು ಎಂದು ಸಮಿತಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಕೊಂಡಿ ಇಲ್ಲಿದೆ:
https://eCommitteeci.gov.in/service/ecourts-services-mobile-application/