ಸುದ್ದಿಗಳು

ರಸ್ತೆ ರಂಪ ಪ್ರಕರಣ: ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್

ರಸ್ತೆ ರಂಪ ಪ್ರಕರಣದಲ್ಲಿ ಸಿಧುಗೆ ವಿಧಿಸಲಾಗಿದ್ದ 3 ವರ್ಷ ಜೈಲು ಶಿಕ್ಷೆಯನ್ನು 2018ರಲ್ಲಿ ಕಡಿಮೆ ಮಾಡಿದ್ದ ಸುಪ್ರೀಂ ಕೋರ್ಟ್‌ ₹1,000 ದಂಡವನ್ನು ಮಾತ್ರ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಕೆಯಾಗಿತ್ತು.

Bar & Bench

1988ರ ರಸ್ತೆ ರಂಪ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ [ಮೃತ ಜಸ್ವಿಂದರ್ ಸಿಂಗ್ ಕಾನೂನು ಪ್ರತಿನಿಧಿ ಮತ್ತು ನವಜೋತ್ ಸಿಂಗ್ ಸಿಧು ಇನ್ನಿತರರ ನಡುವಣ ಪ್ರಕರಣ].

ರಸ್ತೆ ರಂಪ ಪ್ರಕರಣದಲ್ಲಿ ಸಿಧುಗೆ ವಿಧಿಸಲಾಗಿದ್ದ 3 ವರ್ಷ ಜೈಲು ಶಿಕ್ಷೆಯನ್ನು 2018ರಲ್ಲಿ ಕಡಿಮೆ ಮಾಡಿದ್ದ ಸುಪ್ರೀಂ ಕೋರ್ಟ್‌ ಸಿಧುಗೆ ₹1,000 ದಂಡವನ್ನು ಮಾತ್ರ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯ ಮನವಿಯನ್ನು ಸುಪ್ರೀಂ ಕೋರ್ಟ್‌ ನ್ಯಾ. ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠವು ಪುರಸ್ಕರಿಸಿ, ಶಿಕ್ಷೆಯನ್ನು ಹೆಚ್ಚಿಸಿದೆ.

ಪ್ರಕರಣದಲ್ಲಿ ಸಿಧುಗೆ ನೀಡಲಾಗಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ 2018ರಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಕೆಯಾಗಿತ್ತು.

“ನಾವು ಶಿಕ್ಷೆಯ ಕುರಿತ ಮರುಪರಿಶೀಲನಾ ಮನವಿಯನ್ನು ಅನುಮತಿಸಿದ್ದೇವೆ. ದಂಡ ವಿಧಿಸುವುದರ ಜೊತೆಗೆ ಪ್ರತಿವಾದಿಯು ಒಂದು ವರ್ಷ ಜೈಲು ಶಿಕ್ಷೆಗೊಳಪಡಬೇಕು” ಎಂದು ನ್ಯಾಯಾಲಯ ಹೇಳಿದೆ.

ಸಿಧು ಅವರು 1988ರಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಲಿಸಿದ್ದು ರಂಪಾಟಕ್ಕೆ ಕಾರಣವಾಗಿತ್ತು. ಸಿಧು ಅವರು ಗೌತಂ ಸಿಂಗ್‌ ಎಂಬ 65 ವರ್ಷದ ವೃದ್ಧನಿಗೆ ಥಳಿಸಿದ್ದರು. ಇದರಿಂದ ವೃದ್ಧ ಕುಸಿದು ಬಿದ್ದಿದ್ದರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಅಪರಾಧ ನಡೆದ ಸ್ಥಳದಿಂದ ಸಿಧು ಕಾಲ್ಕಿತ್ತಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಅವರ ವಿರುದ್ಧ ಮೃತ ವೃದ್ಧರ ಮಗ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದರು.