ಸುಪ್ರೀಂ ಕೋರ್ಟ್, ಜೈಲು  
ಸುದ್ದಿಗಳು

ಮಹಿಳಾ ಜೈಲುಗಳಲ್ಲಿ ಹೆಚ್ಚುತ್ತಿರುವ ಗರ್ಭಧರಿಸುವ ಪ್ರಕರಣಗಳು: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್

ಜೈಲುಗಳಲ್ಲಿ ಗರ್ಭಧಾರಣೆ ವಿಚಾರ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜೈಲು ಪರಿಸ್ಥಿತಿಗಳ ಬಗ್ಗೆ ತಾನು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಗೌರವ್ ಅಗರ್ವಾಲ್ ಅವರಿಗೆ ಸೂಚಿಸಿದ ಪೀಠ.

Debayan Roy

ಪಶ್ಚಿಮ ಬಂಗಾಳದಲ್ಲಿ ಸೆರೆವಾಸ ಅನುಭವಿಸುತ್ತಿರುವ ಮಹಿಳಾ ಕೈದಿಗಳು ಗರ್ಭಿಣಿಯರಾಗುತ್ತಿದ್ದು ರಾಜ್ಯದ ವಿವಿಧ ಜೈಲುಗಳಲ್ಲಿ ಸುಮಾರು 196 ಶಿಶುಗಳು ಜನಿಸಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸೆರೆವಾಸ ಅನುಭವಿಸುತ್ತಿರುವ ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿರುವ ಪ್ರಕರಣ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಜೈಲುಗಳಲ್ಲಿ ಮಹಿಳಾ ಕೈದಿಗಳೂ ಗರ್ಭಧರಿಸುತ್ತಿರುವ ವಿಚಾರ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜೈಲು ಪರಿಸ್ಥಿತಿಗಳ ಬಗ್ಗೆ ತಾನು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಗೌರವ್ ಅಗರ್‌ವಾಲ್‌ ಅವರಿಗೆ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠ ಸೂಚಿಸಿತು.

ಕಳೆದ ವಾರ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಮಾನುಲ್ಲಾ ನೇತೃತ್ವದ ಪೀಠ ಜೈಲು ಪರಿಸ್ಥಿತಿಗಳ ಬಗ್ಗೆ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿತ್ತು.

ಮಹಿಳಾ ಕೈದಿಗಳು ಗರ್ಭಿಣಿಯರಾಗುತ್ತಿರುವ ವಿಚಾರ ಕಳೆದ ಗುರುವಾರ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಸದ್ದು ಮಾಡಿದ ಹಿನ್ನೆಲೆಯಲ್ಲಿ ಜೈಲು ಪರಿಸ್ಥಿತಿಗಳ ಬಗ್ಗೆ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಪ್ರಕರಣದೊಂದಿಗೆ ಈ ವಿಚಾರವನ್ನೂ ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ಧರಿಸಿತು.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜೈಲು ಸುಧಾರಣೆಗಳು ಮತ್ತು ಸುಧಾರಣಾ ಗೃಹಗಳಿಗೆ ಸಂಬಂಧಿಸಿದ ಪ್ರಕರಣವನ್ನು ಉಲ್ಲೇಖಿಸುವಾಗ ಹೈಕೋರ್ಟ್‌ನ ಅಮಿಕಸ್ ಕ್ಯೂರಿ ಅವರು ಸೆರೆವಾಸ ಅನುಭವಿಸುತ್ತಿರುವ ಮಹಿಳಾ ಕೈದಿಗಳು ಗರ್ಭಿಣಿಯರಾಗುತ್ತಿದ್ದು ರಾಜ್ಯದ ವಿವಿಧ ಜೈಲುಗಳಲ್ಲಿ ಸುಮಾರು 196 ಶಿಶುಗಳು ಜನಿಸಿರುವ ಮಾಹಿತಿ ಒದಗಿಸಿದ್ದರು.

ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ ಬರುವ ಸೋಮವಾರ (ನಾಡಿದ್ದು) ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಭಾಗೀಯ ಪೀಠದೆದುರು ಪ್ರಕರಣ ಪ್ರಸ್ತಾಪಿಸುವಂತೆ ಸೂಚಿಸಿತ್ತು.

ಈ ಕಳವಳ ದೂರವಾಗಬೇಕೆಂದರೆ ಸುಧಾರಣಾ ಗೃಹಗಳ ಪುರುಷ ಉದ್ಯೋಗಿಗಳು ಮಹಿಳಾ ಕೈದಿಗಳಿರುವ ಆವರಣ ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದು ಅಮಿಕಸ್ ಆ ಸಂದರ್ಭದಲ್ಲಿ ಸಲಹೆ ನೀಡಿದ್ದರು.