Supreme Court, PMLA
Supreme Court, PMLA 
ಸುದ್ದಿಗಳು

ಪಿಎಂಎಲ್ಎ ಸೆಕ್ಷನ್ 50 ಮತ್ತು 63ರ ಸಿಂಧುತ್ವ ಪರೀಕ್ಷೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

Bar & Bench

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 50 ಮತ್ತು 63ರ ಸಿಂಧುತ್ವ  ಪ್ರಶ್ನಿಸಿದ್ದ ಮನವಿಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯದ (ಇಡಿ)  ಪ್ರತಿಕ್ರಿಯೆ ಕೇಳಿದೆ [ಗೋವಿಂದ ಸಿಂಗ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಡಾ.ಗೋವಿಂದ್ ಸಿಂಗ್ ಅವರ ಮನವಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿ ಮಾಡಿದೆ.

ತಮ್ಮ ವಿರುದ್ಧ ಇ ಡಿ ಹೊರಡಿಸಿದ್ದ ಸಮನ್ಸ್ ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಿಂಗ್ ಕೋರಿದ್ದ ಮಧ್ಯಂತರ ಪರಿಹಾರದ ಬಗ್ಗೆಯೂ ನೋಟಿಸ್ ನೀಡಲಾಗಿದೆ.

ಪಿಎಂಎಲ್‌ಎ  ಸೆಕ್ಷನ್ 50, ಸಮನ್ಸ್‌, ನೀಡುವಿಕೆ, ದಾಖಲೆಗಳ ತಯಾರಿ ಹಾಗೂ ಸಾಕ್ಷ್ಯ ಒದಗಿಸುವಿಕೆಗೆ ಸಂಬಂಧಿಸಿದ್ದಾಗಿದೆ.  ಸುಳ್ಳು ಮಾಹಿತಿ ನೀಡುವುದು ಅಥವಾ ಮಾಹಿತಿ ನೀಡಲು ವಿಫಲವಾಗುವುದಕ್ಕೆ ಸೆಕ್ಷನ್ 63 ಸಂಬಂಧಿಸಿದೆ.

ಪಿಎಂಎಲ್‌ಎ, ಕ್ರಿಮಿನಲ್ ಕಾನೂನಾಗಿರುವುದರಿಂದ, ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ ಒದಗಿಸಿದ ರೀತಿಯಲ್ಲಿಯೇ, ಸಮನ್ಸ್ ಪಡೆದವರಿಗೆ ರಕ್ಷಣೆ ಒದಗಿಸಬೇಕು. ಹಾಗೆ ಇಲ್ಲದಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಗೋವಿಂದ ಸಿಂಗ್‌ ವಾದಿಸಿದ್ದರು.

ವಿಜಯ್ ಮದನ್‌ಲಾಲ್ ಚೌಧರಿ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ ನಿಯಮಾವಳಿಗಳ ಸಿಂಧುತ್ವ ಎತ್ತಿಹಿಡಿದು  ಜುಲೈ 27, 2022ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ಅದು ನೋಟಿಸ್‌ ನೀಡಿದೆ.