ಭಾರತದ ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಮಹಿಳೆ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬಹುದೇ ಎಂದು ಪರಿಶೀಲಿಸಲಿರುವ ಸುಪ್ರೀಂ

"ನಮ್ಮ ಪ್ರಕಾರ, ಪುರುಷನನ್ನು ಮಾತ್ರ ಆರೋಪಿಯನ್ನಾಗಿ ಮಾಡಬಹುದು" ಎಂದು ನ್ಯಾಯಾಲಯವು ಇಂದು ಪ್ರಕರಣವೊಂದರಲ್ಲಿ ನೋಟಿಸ್ ನೀಡುವಾಗ ಮೌಖಿಕವಾಗಿ ಹೇಳಿತು.

Bar & Bench

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ಅಡಿಯಲ್ಲಿ ಮಹಿಳೆಯನ್ನು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಬಹುದೇ ಎಂಬ ಪ್ರಶ್ನೆ ಶುಕ್ರವಾರ ಸುಪ್ರೀಂ ಕೋರ್ಟ್ ಮುಂದೆ ಉದ್ಭವಿಸಿದೆ. 62 ವರ್ಷದ ವಿಧವೆಯೊಬ್ಬಳು ತನ್ನ ಮಗನ ವಿರುದ್ಧ ದಾಖಲಿಸಲಾದ ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ ಎಂದು ಸಲ್ಲಿಸಿರುವ ಮನವಿ ವೇಳೆ ಈ ಜಿಜ್ಞಾಸೆ ಮೂಡಿದೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಸಂಜಯ್ ಕರೋಲ್ ಅವರ ನ್ಯಾಯಪೀಠದ ಮುಂದೆ ಈ ಪ್ರಕರಣ ಇಂದು ವಿಚಾರಣೆ ಬಂದಿತ್ತು. ಅತ್ಯಾಚಾರ ಪ್ರಕರಣದಲ್ಲಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಬಹುದೇ ಎಂಬ ಬಗ್ಗೆ ನ್ಯಾಯಾಲಯ ಮೌಖಿಕವಾಗಿ ಅನುಮಾನ ವ್ಯಕ್ತಪಡಿಸಿತು.

"ನಮ್ಮ ಪ್ರಕಾರ, ಪುರುಷನನ್ನು ಮಾತ್ರ ಆರೋಪಿಯನ್ನಾಗಿ ಮಾಡಬಹುದು " ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧವೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂದೂಡುವುದಕ್ಕೂ ಮೊದಲು ನ್ಯಾಯಾಲಯವು ನೋಟಿಸ್ ನೀಡಲು ಮುಂದಾಯಿತು.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 375 ಭಾರತೀಯ ಕಾನೂನಿನ ಅಡಿಯಲ್ಲಿ "ಅತ್ಯಾಚಾರ" ಅಪರಾಧವನ್ನು ವ್ಯಾಖ್ಯಾನಿಸುತ್ತದೆ. ಈ ನಿಬಂಧನೆಯು ಒಬ್ಬ "ಪುರುಷನನ್ನು" ಉಲ್ಲೇಖಿಸುವ ಮೂಲಕ ಪ್ರಾರಂಭವಾಗುತ್ತದೆ ("ಒಬ್ಬ  ಪುರುಷನು 'ಅತ್ಯಾಚಾರ' ಮಾಡಿದ್ದಾನೆ ಎಂದು ಹೇಳಲು ಈ ಅಂಶಗಳು..." ). ಇಂತಹ ಪ್ರಕರಣದಲ್ಲಿ ಆರೋಪಿಯಾಗಿ, ಅಂದರೆ ಸಾಮಾನ್ಯವಾಗಿ ಅತ್ಯಾಚಾರದ ಅಪರಾಧಕ್ಕಾಗಿ ಪುರುಷರನ್ನು ಮಾತ್ರ ಬಂಧಿಸಬಹುದಾಗಿದೆ.

ಅರ್ಜಿದಾರರ ಪರ ವಕೀಲರು ಮಹಿಳೆಯ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಇದಲ್ಲದೆ, ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆ ಸಾಮಾನ್ಯ ಉದ್ದೇಶವನ್ನು ಹಂಚಿಕೊಳ್ಳುತ್ತಾಳೆ ಎಂದು ಹೇಳಲಾಗುವುದಿಲ್ಲ, ಏಕೆಂದರೆ ಮಹಿಳೆಯರನ್ನು ಅತ್ಯಾಚಾರದ ವ್ಯಾಖ್ಯಾನದಿಂದ ಹೊರಗಿಡಲಾಗಿದೆ ಎಂದು ವಾದಿಸಿದರು.

ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗುವಲ್ಲಿ ಆರೋಪಿ-ವಿಧವೆ ಮತ್ತು ಆಕೆಯ ಮಗ ಭಾಗಿಯಾಗಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ವಿಧವೆಯ ಹಿರಿಯ ಪುತ್ರನನ್ನು ಫೇಸ್‌ಬುಕ್‌ ಮೂಲಕ ಭೇಟಿಯಾಗಿ ಸುದೀರ್ಘ ಅವಧಿಯವರೆಗೆ 'ದೂರದ ಸಂಬಂಧ'ದಲ್ಲಿದ್ದ ನಂತರ ಯುವತಿಯು ಹಿರಿಯ ಮಗನ ಸೂಚನೆಯಂತೆ ವಿಧವೆಯೊಂದಿಗೆ ವಾಸಿಸಲು ಆರಂಭಿಸಿದ್ದಳು.

ವಿಧವೆ ಅರ್ಜಿದಾರೆಯ ಹಿರಿಯ ಮಗ ಯಾವುದೇ ಆಚರಣೆ ಅಥವಾ ಸಮಾರಂಭಗಳಿಲ್ಲದೆ ವೀಡಿಯೊ ಕರೆ ಮೂಲಕ ಯುವತಿಯನ್ನು ಮದುವೆಯಾಗಿದ್ದರು. ಆನಂತರ ಯುವತಿಯು ಅಂತಿಮವಾಗಿ ವಿಧವೆಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದಳು ಎಂದು ವಿಧವೆ ಆರೋಪಿಸಿದ್ದಾರೆ. ಅಮೆರಿಕದಲ್ಲಿ ವಾಸಿಸುತ್ತಿದ್ದ ಹಿರಿಯ ಮಗ ಯುವತಿಯನ್ನು ದೈಹಿಕವಾಗಿ ಭೇಟಿಯಾಗಿರಲಿಲ್ಲ ಎಂದು ವಿಧವೆ ಹೇಳಿದರು. ಈ ನಡುವೆಯ ವಿಧವೆಯ ಕಿರಿಯ ಮಗ ವಿದೇಶದಿಂದ ಹಿಂತಿರುಗಿ ಬಂದಿದ್ದ.

ಈ ಹಂತದಲ್ಲಿ ವಿಧವೆ ಅರ್ಜಿದಾರೆಯ ಮೇಲೆ ಯುವತಿ ಮತ್ತು ಆಕೆಯ ಹಿರಿಯ ಮಗನ ನಡುವಿನ ಅನೌಪಚಾರಿಕ "ಮದುವೆ" ವ್ಯವಸ್ಥೆಯನ್ನು ಕೊನೆಗೊಳಿಸುವಂತೆ ಕುಟುಂಬದ ಸದಸ್ಯರು ಒತ್ತಡ ಹೇರತೊಡಗಿದರು ಎನ್ನಲಾಗಿದೆ. ಮುಂದೆ ವಿಧವೆ ಅರ್ಜಿದಾರೆಯ ಕುಮ್ಮಕ್ಕಿನಿಂದಲೇ ಆಕೆಯ ಕಿರಿಯ ಮಗ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನುವುದು ಆರೋಪವಾಗಿದೆ. ಯುವತಿಯ ದೂರಿನ ಅಧಾರದಲ್ಲಿ ವಿಧವೆ ಮತ್ತು ಆಕೆಯ ಕಿರಿಯ ಮಗನ ವಿರುದ್ಧ ಅತ್ಯಾಚಾರ (ಭಾರತೀಯ ದಂಡ ಸಂಹಿತೆ / ಐಪಿಸಿಯ ಸೆಕ್ಷನ್ 376 (2) (ಎನ್), ಅಕ್ರಮ ಬಂಧನ (ಸೆಕ್ಷನ್ 342), ಗಾಯ (ಸೆಕ್ಷನ್ 323) ಮತ್ತು ಕ್ರಿಮಿನಲ್ ಬೆದರಿಕೆ (ಸೆಕ್ಷನ್ 506) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ವಿಚಾರಣಾ ನ್ಯಾಯಾಲಯ ಮತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಿಧವೆಯ ನಿರೀಕ್ಷಣಾ ಜಾಮೀನು ಮನವಿ ಕೋರಿಕೆಯನ್ನು ನಿರಾಕರಿಸಿದ್ದವು. ಇದರಿಂದಾಗಿ ಆಕೆ ಸುಪ್ರೀಂ ಕೋರ್ಟ್ಅನ್ನು ಎಡತಾಕಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಅಲಹಾಬಾದ್ ಹೈಕೋರ್ಟ್ , ಮಹಿಳೆ ಅತ್ಯಾಚಾರದ ಅಪರಾಧವನ್ನು ಮಾಡಲು ಸಾಧ್ಯವಿಲ್ಲವಾದರೂ, ಸಾಮೂಹಿಕ ಅತ್ಯಾಚಾರ ಎಸಗಲು ಮಹಿಳೆಯು ಅನುಕೂಲ ಮಾಡಿಕೊಟ್ಟರೆ ಐಪಿಸಿಯ ತಿದ್ದುಪಡಿ ಮಾಡಿದ ನಿಬಂಧನೆಗಳ ಪ್ರಕಾರ ಆಕೆಯನ್ನು ಅತ್ಯಾಚಾರದ ಅಪರಾಧಕ್ಕಾಗಿ ವಿಚಾರಣೆಗೆ ಒಳಪಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದನ್ನು ಇಲ್ಲಿ ನೆನೆಯಬಹುದು.