ಸುದ್ದಿಗಳು

ಪ್ರತಿಕೂಲ ಸಾಕ್ಷಿಯ ಪಾಟಿ ಸವಾಲಿನಲ್ಲಿ ಪ್ರಾಸಿಕ್ಯೂಟರ್ ಮತ್ತು ವಿಚಾರಣಾ ನ್ಯಾಯಾಲಯದ ಪಾತ್ರದ ಕುರಿತು ಸುಪ್ರೀಂ ವಿವರಣೆ

ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಪಾತ್ರ ವಹಿಸಬೇಕೆ ವಿನಾ ಸಾಕ್ಷಿಗಳ ಹೇಳಿಕೆದಾಖಲಿಸಿಕೊಳ್ಳುವ ಟೇಪ್ ರೆಕಾರ್ಡರ್ಗಳಾಗಿ ಕಾರ್ಯನಿರ್ವಹಿಸಬಾರದು ಎಂದು ಅದು ಬುದ್ಧಿವಾದ ಹೇಳಿದೆ.

Bar & Bench

ಸತ್ಯ ಬಯಲಿಗೆಳೆಯಲು ಪ್ರತಿಕೂಲ ಸಾಕ್ಷಿಗಳ ಸಂಪೂರ್ಣ ಪಾಟಿ ಸವಾಲು ನಡೆಯುವಂತೆ ನೋಡಿಕೊಳ್ಳಬೇಕು ಮತ್ತು ಅವರು ಸಿಆರ್‌ಪಿಸಿ ಸೆಕ್ಷನ್‌ 161ರ ಅಡಿ ದಾಖಲಾದ ಹೇಳಿಕೆಯಿಂದ ಅವರು ಉದ್ದೇಶಪೂರ್ವಕವಾಗಿ ಹಿಂದಡಿ ಇಡುತ್ತಿದ್ದಾರೆ ಎಂಬುದನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಕಿವಿಮಾತು ಹೇಳಿದೆ [ಅನೀಸ್‌ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಪ್ರತಿಕೂಲ ಸಾಕ್ಷಿಗಳನ್ನು ಪರಿಣಾಮಕಾರಿಯಾಗಿ ಪಾಟಿ ಸವಾಲಿಗೆ ಒಳಪಡಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಕಳವಳ ವ್ಯಕ್ತಪಡಿಸಿತು.

ಪ್ರತಿಕೂಲ ಸಾಕ್ಷಿಯನ್ನು ಅವನ ಅಥವಾ ಆಕೆಯ ಪೊಲೀಸ್‌ ಹೇಳಿಕೆಯೊಂದಿಗೆ ಎದುರಿಸಲು  ವ್ಯತಿರಿಕ್ತತೆಗಳನ್ನು ದಾಖಲೆಯಲ್ಲಿ ಒದಗಿಸುವುದಷ್ಟೇ ಸಾಲದು ಎಂದು ನ್ಯಾಯಾಲಯ ವಿವರಿಸಿದೆ.

 “ಪಾಟೀ ಸವಾಲಿನ ಉದ್ದೇಶ ಮುಖ್ಯವಾದ ಸಾಕ್ಷ್ಯದ ನಿಖರತೆ, ವಿಶ್ವಾಸಾರ್ಹತೆ ಮತ್ತು ಸಾಮಾನ್ಯ ಮೌಲ್ಯವನ್ನು ದೃಢಪಡಿಸಿಕೊಳ್ಳುವುದು, ಸಾಕ್ಷಿ ಈಗಾಗಲೇ ಹೇಳಿರುವ ವಾಸ್ತವಾಂಶಗಳನ್ನು ಶೋಧಿಸುವುದು ಮತ್ತು ಪಾಟಿಸವಾಲಿಗೆ ಒಳಪಡಿಸಲಾದ ಪಕ್ಷಕಾರನ ವಾದಕ್ಕೆ ಸಂಬಂಧಿಸಿದ ವ್ಯತ್ಯಯಗಳನ್ನು ಪತ್ತೆ ಹಚ್ಚಿ ಬಹಿರಂಗಪಡಿಸುವುದು ಅಥವಾ ಹತ್ತಿಕ್ಕಿರುವ ಸತ್ಯಗಳನ್ನು ಬಯಲಿಗೆಳೆಯುವುದಾಗಿದೆ” ಎಂದು ಅದು ನುಡಿದಿದೆ.

ಒಳ್ಳೆಯ ಮತ್ತು ಅನುಭವಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೇವಲ ದಾಖಲೆಯಲ್ಲಿ ವ್ಯತಿರಿಕ್ತತೆಯನ್ನು ಮಂಡಿಸದೆ ಪೊಲೀಸರು ವಿವರಿಸಿದ ರೀತಿ ಘಟನೆಯನ್ನು ನಿಜವಾಗಿ ನೋಡಿದ್ದಾರೆ ಎಂದು ಸಾಬೀತುಪಡಿಸಲು ಪ್ರತಿಕೂಲ ಸಾಕ್ಷಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸುತ್ತಾರೆ ಎಂದು ಅದು ತಿಳಸಿಇದೆ.

1995ರಲ್ಲಿ ತನ್ನ ಪತ್ನಿಯನ್ನು ಕೊಂದ ವ್ಯಕ್ತಿಯೊಬ್ಬನ ಶಿಕ್ಷೆಯನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಪ್ರಕರಣದ ಪ್ರತ್ಯಕ್ಷದರ್ಶಿಯಾಗಿದ್ದ ಸಂತ್ರಸ್ತೆಯ 5 ವರ್ಷದ ಮಗಳು ವಿಚಾರಣೆ ವೇಳೆ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದಳು.

ಮಗು ಪ್ರತಿಕೂಲ ಸಾಕ್ಷಿಯಾದ ಬಳಿಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವ್ಯತಿರಿಕ್ತತೆಯನ್ನು ಸೂಕ್ತ ರೀತಿಯಲ್ಲಿ ದಾಖಲಿಸದೆ ಕೆಲವು ಸಲಹೆಗಳನ್ನು ಮಾತ್ರವೇ ನೀಡಿದ್ದರು.  ಈ ವೇಳೆ ವಿಚಾರಣಾ ನ್ಯಾಯಾಲದ ನ್ಯಾಯಾಧೀಶರು ಸಕ್ರಿಯ ಪಾತ್ರ ವಹಿಸಲು ವಿಫಲರಾಗಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ತನ್ನ ಕರ್ತವ್ಯದಲ್ಲಿ ವಿಫಲವಾದರೆ  ಸತ್ಯವನ್ನು ಕಂಡುಕೊಳ್ಳುವುದು ನ್ಯಾಯಾಲಯದ ಕರ್ತವ್ಯ ಎಂದು ನ್ಯಾಯಾಲಯ ನುಡಿಯಿತು.

ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆಯಲ್ಲಿ ಭಾಗವಹಿಸುವ ಪಾತ್ರ ವಹಿಸಬೇಕೆ ವಿನಾ ಕೇವಲ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುವ   ಟೇಪ್ ರೆಕಾರ್ಡರ್‌ಗಳಾಗಿ ಕಾರ್ಯನಿರ್ವಹಿಸಬಾರದು ಎಂದು ಅದು ತಿಳಿಹೇಳಿತು.

ಪ್ರಾಸಿಕ್ಯೂಟರ್‌ಗಳು ಅಸಡ್ಡೆ ತೋರಿದಾಗ ಅಥವಾ ವೈರಾಗ್ಯ  ಧೋರಣೆ ತಳೆದಾಗ ಅಗತ್ಯ ಸಾಕ್ಷ್ಯವನ್ನು ಹೊರತರಲು ವಿಚಾರಣಾ ನ್ಯಾಯಾಲಯವು ಕ್ರಿಮಿನಲ್ ಕಾನೂನಿನಲ್ಲಿ ಲಭ್ಯವಿರುವ ವ್ಯಾಪಕ ಅಧಿಕಾರವನ್ನು ಚಲಾಯಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತು.