ಸುದ್ದಿಗಳು

ಪಂಜಾಬ್‌ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶದಲ್ಲಿನ ವಿವಾದಾತ್ಮಕ ಹೇಳಿಕೆ ತೆಗೆದುಹಾಕಿದ ಸುಪ್ರೀಂ ಕೋರ್ಟ್‌

ನ್ಯಾಯಮೂರ್ತಿ ರಾಜ್‌ಬೀರ್ ಸೆಹ್ರಾವತ್ ಅವರು ಜುಲೈ 17 ರಂದು ನೀಡಿದ ಆದೇಶದಲ್ಲಿ ನ್ಯಾಯಾಂಗ ನಿಂದನೆ ವಿಚಾರಣಾ ಪ್ರಕ್ರಿಯೆಯಲ್ಲಿ ಹೈಕೋರ್ಟ್‌ ನೀಡಿದ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಯಾವುದೇ ಪಾತ್ರವಿರುವುದಿಲ್ಲ ಎಂದಿದ್ದರು.

Bar & Bench

ನ್ಯಾಯಾಂಗ ನಿಂದನೆ ಪ್ರಕರಣವೊಂದರ ವಿಚಾರಣೆಗೆ ತಡೆ ನೀಡಿದ್ದಕ್ಕಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ರಾಜ್‌ಬೀರ್‌ ಸೆಹ್ರಾವತ್ ಅವರು ಸುಪ್ರೀಂ ಕೋರ್ಟ್ ಅನ್ನು ಟೀಕಿಸಿ ಮಾಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ತೆಗೆದುಹಾಕಿದೆ [ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ, ದಿನಾಂಕ 17.07. 2024 ಮತ್ತು ಪೂರಕ ವಿಷಯಗಳು].

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯ ಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನುಳ್ಳ ಐವರು ನ್ಯಾಯಮೂರ್ತಿಗಳ ಪೀಠವು ನ್ಯಾಯಮೂರ್ತಿ ಸೆಹ್ರಾವತ್ ಅವರು ಮಾಡಿದ ಅವಲೋಕನಗಳು ಅತ್ಯಂತ ಕಳವಳಕ್ಕೆ ಈಡು ಮಾಡುವಂತಿದ್ದು, ಅದನ್ನು ಕೈಬಿಡಬೇಕಿದೆ ಎಂದು ಅಭಿಪ್ರಾಯಪಟ್ಟಿತು.

ಸುಪ್ರೀಂ ಕೋರ್ಟ್ ಆದೇಶಗಳ ಅನುಸರಣೆಯು ಆಯ್ಕೆಯ ವಿಷಯವಲ್ಲ ಬದಲಿಗೆ ಅದು ಕಾನೂನು ವ್ಯವಸ್ಥೆಗೆ ಬದ್ಧವಾಗಿರುವಿಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ. "ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳ ಬೇಡದ ಅವಲೋಕನಗಳು ಸಂಪೂರ್ಣವಾಗಿ ಅನಗತ್ಯ ಮತ್ತು ಅನಪೇಕ್ಷಿತವಾಗಿವೆ ಎಂದು ನಾವು ಭಾವಿಸುತ್ತೇವೆ. ಸುಪ್ರೀಂ ಕೋರ್ಟ್ ನಿರ್ದೇಶನಗಳ ಅನುಸರಣೆ ಮಾಡಬೇಕಾದುದು ಆಯ್ಕೆಯ ವಿಷಯವಲ್ಲ ಬದಲಿಗೆ ಈ ದೇಶದ ನ್ಯಾಯನಿರ್ಣಯ ಪ್ರಕ್ರಿಯೆಯನ್ನು ಗಮನಿಸುವ ಕಾನೂನು ವ್ಯವಸ್ಥೆಯೆಡೆಗೆ ಬದ್ಧವಾಗಿರುವ ವಿಷಯವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಒಂದೊಮ್ಮೆ ಆದೇಶದಿಂದ ಪಕ್ಷಕಾರರು ಅಸಮಾಧಾನಗೊಳ್ಳಬಹುದು, ಆದರೆ ಉನ್ನತ ಮೇಲ್ಮನವಿ ನ್ಯಾಯಾಲಯದೆಡೆಗೆ ನ್ಯಾಯಮೂರ್ತಿಗಳು ಎಂದಿಗೂ ಅಸಮಾಧಾನಗೊಳ್ಳಲಾಗದು ಎಂದು ಅದು ಸ್ಪಷ್ಟಪಡಿಸಿತು. "ಇಂತಹ ಆದೇಶಗಳು ಇಡೀ ನ್ಯಾಯಾಂಗ ಯಂತ್ರಕ್ಕೆ ಅಪಖ್ಯಾತಿ ತರಲು ಉದ್ದೇಶಿಸುತ್ತವೆ ಮತ್ತು ಇದು ಹೈಕೋರ್ಟ್‌ನ ಘನತೆಯನ್ನು ಕಡಿಮೆ ಮಾಡುತ್ತದೆ. ಇಂತಹ ಅವಲೋಕನಗಳು ಸಂಪೂರ್ಣವಾಗಿ ಅನಗತ್ಯವಾದ ಕಾರಣದಿಂದ ಜುಲೈ 17 ರ ಆದೇಶದ ವಿರುದ್ಧ ಸ್ವಯಂ ಪ್ರೇರಣೆಯಿಂದ ಪ್ರಕರಣವನ್ನು ಪರಿಗಣಿಸದೆ ವಿಧಿಯಿಲ್ಲ ಎಂದು ಪೀಠ ಹೇಳಿತು. ಇದೇ ವೇಳೆ ಪೀಠವು ಸುಪ್ರೀಂ ಕೋರ್ಟ್‌ನ ಆದೇಶಗಳು ಮತ್ತು ವಿಭಾಗೀಯ ಪೀಠಗಳು ಹೊರಡಿಸಿದ ಆದೇಶಗಳೊಂದಿಗೆ ವ್ಯವಹರಿಸುವಾಗ ನ್ಯಾಯಮೂರ್ತಿಗಳು ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ ಎಂದು ನಿರೀಕ್ಷಿಸುವುದಾಗಿ ಭರವಸೆ ವ್ಯಕ್ತಪಡಿಸಿತು.

ಘಟನೆಗೆ ಕಾರಣವಾದ ನ್ಯಾ. ಸೆಹ್ರಾವತ್‌ ಅವರ ಅವಲೋಕನವು ಉನ್ನತ ನ್ಯಾಯಾಲಯದ ತಡೆಯಾಜ್ಞೆಗಳು ಉಂಟು ಮಾಡುವ ಪರಿಣಾಮಗಳ ಬಗ್ಗೆ ತಿಳಿಸುತ್ತಾ, ಗೌರವಾನ್ವಿತ ಸುಪ್ರೀಂ ಕೋರ್ಟ್ ಕೂಡ ತನ್ನ ಆದೇಶಗಳು ನಿರ್ದಿಷ್ಟವಾಗಿ ಉಂಟು ಮಾಡುವ ಪರಿಣಾಮಗಳನ್ನು ಅರಿತು ಜಾಗರೂಕತೆಯಿಂದ ಹೆಜ್ಜೆ ಇರಿಸಬೇಕು ಎಂದಿತ್ತು.

ಮುಂದುವರೆದು ನ್ಯಾ. ಸೆಹ್ರಾವತ್ ಅವರು ಜುಲೈ 17 ರ ತಮ್ಮ ಆದೇಶದಲ್ಲಿ ನ್ಯಾಯಾಂಗ ನಿಂದನೆ ವಿಚಾರಣಾ ಪ್ರಕ್ರಿಯೆಯಲ್ಲಿ ಹೈಕೋರ್ಟ್‌ ನೀಡಿದ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಯಾವುದೇ ಪಾತ್ರ ಹೊಂದಿರುವುದಿಲ್ಲ ಎಂದಿದ್ದರು.

ಇಂದಿನ ವಿಚಾರಣೆಯ ಆರಂಭದಲ್ಲಿ, ಸಿಜೆಐ ಚಂದ್ರಚೂಡ್ ಅವರು ನ್ಯಾಯಮೂರ್ತಿ ಸೆಹ್ರಾವತ್ ಮಾಡಿದ ಅವಲೋಕನಗಳು ಸುಪ್ರೀಂ ಕೋರ್ಟ್‌ಗೆ ನೋವುಂಟುಮಾಡಿದೆ ಎಂದರು. "ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು ನ್ಯಾಯಾಂಗ ನಿಂದನೆ ಪ್ರಕರಣದೊಂದಿಗೆ ವ್ಯವಹರಿಸುವಾಗ ಮಾಡಿದ ಅವಲೋಕನಗಳಿಂದ ನಮಗೆ ನೋವಾಗಿದೆ" ಎಂದು ಅವರು ಹೇಳಿದರು.