ಅರ್ಹ ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಅಥವಾ ಶಿಕ್ಷೆ ಪ್ರಮಾಣ ಕಡಿಮೆಗೊಳಿಸಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸಮಗ್ರವಾಗಿ ಪರಿಗಣಿಸುವುದರ ಪ್ರಾಮುಖ್ಯತೆಯನ್ನು ಈಚೆಗೆ ಎತ್ತಿ ತೋರಿಸಿರುವ ಸುಪ್ರೀಂ ಕೋರ್ಟ್ ಅಂತಹ ನಿರ್ಧಾರ ಕೈಗೊಳ್ಳುವ ವೇಳೆ ಗಮನಹರಿಸಬೇಕಾದ ಮಾರ್ಗದರ್ಶನಕಾರಿ ಅಂಶಗಳನ್ನು ನಿಗದಿಪಡಿಸಿದೆ [ರಾಜೋ ಮತ್ತು ಬಿಹಾರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಶಿಕ್ಷೆ ಕಡಿಮೆಗೊಳಿಸಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನಿರ್ಧರಿಸುವಾಗ ಶಿಕ್ಷೆ ಮಾಫಿ ಮಂಡಳಿ ಅಥವಾ ಸರ್ಕಾರ ಪರಿಗಣಿಸಬೇಕಾದ ಕೆಲ ಅಂಶಗಳನ್ನು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ನಿಗದಿಪಡಿಸಿದೆ:
ಭವಿಷ್ಯದಲ್ಲಿ ಅಪರಾಧಿಯ ಅಪರಾಧ ಎಸಗುವ ಸಂಭಾವ್ಯತೆ; ಅವನ ಸಾಮಾಜಿಕ-ಆರ್ಥಿಕ ಪರಿಸ್ಥಿತಿ, ವಯಸ್ಸು, ಆರೋಗ್ಯದ ಸ್ಥಿತಿ, ಕೌಟುಂಬಿಕ ಸಂಬಂಧಗಳು, ಸಮಾಜದೊಂದಿಗೆ ಮರುಹೊಂದಾಣಿಕೆಯ ಸಾಧ್ಯತೆ ಮತ್ತು ಪಡೆದ ಖುಲಾಸೆಯ ಪ್ರಮಾಣಗಳನ್ನು ಗಮನಿಸಬೇಕು.
ಅಪರಾಧಿಯು ಬಂಧನದಲ್ಲಿದ್ದಾಗ ಶೈಕ್ಷಣಿಕ ಅರ್ಹತೆ ಪಡೆದಿದ್ದರೆ, ಸ್ವಯಂಸೇವೆಯಲ್ಲಿ ತೊಡಗಿದ್ದರೆ, ಮಾಡಿದ ಕೆಲಸ ಅಥವಾ ಉದ್ಯೋಗ, ಜೈಲಿನಲ್ಲಿದ್ದಾಗಿನ ನಡವಳಿಕೆ, ಸಮಾಜವನ್ನು ಕೇಂದ್ರೀಕರಿಸಿಕೊಂಡು ಮಾಡಿದ ಚಟುವಟಿಕೆ ಅಥವಾ ಉತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದರೆ ಆ ಅಂಶಗಳನ್ನು ಹಾಗೂ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಯ ಅಂಶಗಳನ್ನು ಪರಿಗಣಿಸಬೇಕು.
ಸೆರೆವಾಸ ಮುಂದುವರೆಸುವುದರಿಂದ ಯಾವುದೇ ಫಲಪ್ರದ ಉದ್ದೇಶ ಸಾಕಾರಗೊಳ್ಳುತ್ತದೆಯೇ ಎಂಬ ಅಂಶವನ್ನು ಸಹ ಗಮನಿಸಬೇಕು.
ಇದಕ್ಕೆ ಸಂಬಂಧಿಸಿದಂತೆ ಶಿಕ್ಷೆ ಮಾಫಿ ಮಂಡಳಿ ವಿಚಾರಣೆ ನಡೆಸಿದ ನ್ಯಾಯಾಧೀಶರ ಇಲ್ಲವೇ ಪೋಲಿಸ್ ವರದಿಗಳನ್ನು ಮಾತ್ರವೇ ಸಂಪೂರ್ಣ ಅವಲಂಬಿಸಬಾರದು ಎಂದು ಪೀಠ ಹೇಳಿದೆ.
ಬೇರೆ ಜೈಲು ಅಧಿಕಾರಿಗಳ ವ್ಯತಿರಿಕ್ತ ಅಭಿಪ್ರಾಯಗಳನ್ನು ಕಡೆಗಣಿಸಿ ನ್ಯಾಯಾಧೀಶರ ಅಭಿಪ್ರಾಯಕ್ಕೇ ಹೆಚ್ಚು ಒತ್ತು ನೀಡುವುದರಿಂದ ಶಿಕ್ಷೆ ಕಡಿತದ ತೀರ್ಪು ಸಮರ್ಥನೀಯವಾಗದು ಎಂದು ಕೂಡ ಅದು ಎಚ್ಚರಿಸಿದೆ.
2001ರಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವಾಗ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಪರಾಧಿ 24 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದ. ಎರಡು ಸುತ್ತುಗಳಲ್ಲಿ ನ್ಯಾಯಾಧೀಶರು ಮತ್ತು ಪೊಲೀಸ್ ಅಧೀಕ್ಷಕರು ನೀಡಿದ್ದ ಅಭಿಪ್ರಾಯಗಳನ್ನು ಆಧರಿಸಿ ಆತ ಅವಧಿಪೂರ್ವ ಬಿಡುಗಡೆಗಾಗಿ ಸಲ್ಲಸಿದ್ದ ಅರ್ಜಿಯನ್ನು ಮಂಡಳಿ ತಿರಸ್ಕರಿಸಿತ್ತು. ಹೀಗಾಗಿ ಆತ ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದ. ಅದು ಕೂಡ ಮನವಿ ವಜಾಗೊಳಿಸಿತ್ತು. ಹೀಗಾಗಿ ಆತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ.
ವಿಚಾರಣೆಯ ಕೊನೆಗೆ ಸುಪ್ರೀಂ ಕೋರ್ಟ್ ಶಿಕ್ಷೆ ಮಾಫಿ ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಮೂರು ತಿಂಗಳೊಳಗೆ ಮರುಪರಿಶೀಲಿಸುವಂತೆ ಶಿಕ್ಷೆ ಮಾಫಿ ಮಂಡಳಿಗೆ ಸೂಚಿಸಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]