Political Parties and Supreme Court 
ಸುದ್ದಿಗಳು

ಬಿಹಾರ ಚುನಾವಣೆ: ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಬಹಿರಂಗಗೊಳಿಸದ ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ಬಿಜೆಪಿ, ಕಾಂಗ್ರೆಸ್‌, ಆರ್‌ಜೆಡಿ, ಸಂಯುಕ್ತ ಜನತಾದಳ, ಸಿಪಿಐ ಮತ್ತು ಎಲ್‌ಜೆಪಿಗಳಿಗೆ ತಲಾ ರೂ.1 ಲಕ್ಷ ಹಾಗೂ ಸಿಪಿಐ (ಎಂ) ಮತ್ತು ಎನ್‌ಸಿಪಿಗಳಿಗೆ ತಲಾ ರೂ.5 ಲಕ್ಷ ದಂಡ ವಿಧಿಸಲಾಗಿದೆ

Bar & Bench

ಬಿಹಾರ ವಿಧಾನಸಭಾ ಚುನಾವಣೆ ವೇಳೆ ತಮ್ಮ ಅಭ್ಯರ್ಥಿಗಳ ಅಪರಾಧದ ಹಿನ್ನೆಲೆಯನ್ನು ತಮ್ಮ ಪಕ್ಷಗಳ ಅಧಿಕೃತ ವೆಬ್‌ತಾಣಗಳಲ್ಲಿ, ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಗೊಳಿಸದೆ ಈ ಹಿಂದಿನ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ ಮಂಗಳವಾರ ಎಂಟು ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿದೆ.

ಬಿಜೆಪಿ, ಕಾಂಗ್ರೆಸ್‌, ಆರ್‌ಜೆಡಿ, ಸಂಯುಕ್ತ ಜನತಾದಳ, ಸಿಪಿಐ ಮತ್ತು ಎಲ್‌ಜೆಪಿಗಳಿಗೆ ಆದೇಶವನ್ನು ಭಾಗಶಃ ಪಾಲನೆ ಮಾಡದ ಕಾರಣಕ್ಕೆ ರೂ.1 ಲಕ್ಷ ಹಾಗೂ ಸಂಪೂರ್ಣವಾಗಿ ಪಾಲನೆ ಮಾಡದ ಕಾರಣಕ್ಕಾಗಿ ಸಿಪಿಐ (ಎಂ) ಮತ್ತು ಎನ್ಸಿಪಿಗಳಿಗೆ ರೂ.5 ಲಕ್ಷ ದಂಡವನ್ನು ಸರ್ವೋಚ್ಚ ನ್ಯಾಯಾಲಯ ವಿಧಿಸಿದೆ.

ನ್ಯಾಯಾಲಯದ ಈ ಹಿಂದಿನ ಆದೇಶವನ್ನು ಪಾಲನೆ ಮಾಡದ ಕಾರಣಕ್ಕಾಗಿ ಈ ಪಕ್ಷಗಳ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ನ್ಯಾಯಮೂರ್ತಿಗಳಾದ ರೋಹಿಂಟನ್‌ ಫಾಲಿ ನಾರಿಮನ್‌ ಮತ್ತು ಬಿ ಆರ್‌ ಗವಾಯಿ ಅವರ ನೇತೃತ್ವದ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.

ಸುಪ್ರೀಂ ಕೋರ್ಟ್‌ ಫೆಬ್ರವರಿ 13, 2020ರಲ್ಲಿ ನೀಡಿದ್ದ ನಿರ್ದೇಶನವನ್ನು ಬಿಹಾರ ವಿಧಾನಸಭಾ ಚುನಾವಣೆ ವೇಳೆ ಪಾಲಿಸಲು ರಾಜಕೀಯ ಪಕ್ಷಗಳು ವಿಫಲವಾದ ಹಿನ್ನೆಲೆಯಲ್ಲಿ ಬ್ರಜೇಜ್‌ ಸಿಂಗ್‌ ಮತ್ತು ಮನೀಶ್ ಕುಮಾರ್‌ ಎನ್ನುವರು ನ್ಯಾಯಾಂಗ ನಿಂದನೆ ಅರ್ಜಿಯನ್ನು ಈ ಪಕ್ಷಗಳ ವಿರುದ್ಧ ದಾಖಲಿಸಿದ್ದರು. ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿ ಹಿರಿಯ ವಕೀಲ ಕೆ ವಿ ವಿಶ್ವನಾಥ್‌ ಅವರನ್ನು ನ್ಯಾಯಾಲಯ ನೇಮಿಸಿತ್ತು.

ಬಹುತೇಕ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೇಲೆ ಇದ್ದ ಅಪರಾಧದ ಪ್ರಕರಣಗಳ ಕುರಿತಾದ ಮಾಹಿತಿಯನ್ನು ಅಸ್ಪಷ್ಟವಾಗಿಯೂ, ಯಾಂತ್ರಿಕವಾಗಿಯೂ ಪತ್ರಿಕೆಗಳಲ್ಲಿ, ಇತರೆ ಮಾಧ್ಯಮಗಳಲ್ಲಿ ನೀಡಿದ್ದುದನ್ನು ಅಮಿಕಸ್‌ ಕ್ಯೂರಿ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಕಡಿಮೆ ಪ್ರಸರಣವುಳ್ಳ ಪತ್ರಿಕೆಗಳಲ್ಲಿ ಮಾಹಿತಿಯನ್ನು ಪ್ರಕಟಿಸಿರುವುದು ಕೂಡ ನಡೆದಿತ್ತು.

ಗೆಲುವೊಂದನ್ನೇ ಮಾನದಂಡವಾಗಿ ಪರಿಗಣಿಸಿದ್ದ ಪಕ್ಷಗಳು ಗಂಬೀರ ಸ್ವರೂಪದ ಅಪರಾಧ ಪ್ರಕರಣಗಳಾದ ಕೊಲೆ, ಹಣಕ್ಕಾಗಿ ಬೆದರಿಸುವುದು, ಪ್ರಾಣ ಬೆದರಿಕೆ ಒಡ್ಡುವುದು ಮುಂತಾದ ಆರೋಪ ಹೊತ್ತಿದ್ದವರನ್ನು (ಸೆಕ್ಷನ್‌ 307, 386, 506) ಸಹ ಅಭ್ಯರ್ಥಿಗಳನ್ನಾಗಿ ಮಾಡಿದ್ದರ ಬಗ್ಗೆ ಅಮಿಕಸ್ ಕ್ಯೂರಿ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.