Supreme Court Judges 
ಸುದ್ದಿಗಳು

ಐವರು ನೂತನ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೆ ಏರಿಕೆ

ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್‌, ಸಂಜಯ್ ಕರೋಲ್, ಪಿ ವಿ ಸಂಜಯ್ ಕುಮಾರ್, ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಮನೋಜ್ ಮಿಶ್ರಾ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಿ ಆದೇಶಿಸಲಾಗಿತ್ತು.

Bar & Bench

ನೂತನವಾಗಿ ಐವರು ನ್ಯಾಯಮೂರ್ತಿಗಳು ಸೋಮವಾರ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.  

ಸಿಜೆಐ ಡಿ ವೈ ಚಂದ್ರಚೂಡ್ ಅವರು ಇಂದು ಬೆಳಿಗ್ಗೆ ಐವರು ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದವರ ವಿವರ ಇಂತಿದೆ:

- ನ್ಯಾ. ಪಂಕಜ್ ಮಿತ್ತಲ್‌;

- ನ್ಯಾ. ಸಂಜಯ್ ಕರೋಲ್;

- ನ್ಯಾ. ಪಿ ವಿ ಸಂಜಯ್ ಕುಮಾರ್;

- ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ;

- ನ್ಯಾ. ಮನೋಜ್ ಮಿಶ್ರಾ.

ಸುಪ್ರೀಂ ಕೋರ್ಟ್ ಕೊಲಿಜಿಯಂ 2022ರ ಡಿಸೆಂಬರ್ 13ರಂದು ಐವರು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪದೋನ್ನತಿ ನೀಡಲು ಶಿಫಾರಸು ಮಾಡಿತ್ತು. ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಫೆಬ್ರವರಿ 4ರಂದು ಹೊರಡಿಸಿತ್ತು. ನೇಮಕಾತಿ ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕಳೆದ ಶುಕ್ರವಾರ (ಫೆ. 3) ತರಾಟೆಗೆ ತೆಗೆದುಕೊಂಡಿತ್ತು.

ಆಗ ಅಟಾರ್ನಿ ಜನರಲ್‌ ಎನ್‌ ವೆಂಕಟರಮಣಿ ಅವರು ಶೀಘ್ರದಲ್ಲೇ ನೇಮಕಾತಿ ಮಾಡಲಾಗುವುದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠಕ್ಕೆ ತಿಳಿಸಿದ್ದರು. ಈ ಹಂತದಲ್ಲಿ ಪೀಠ, ಹತ್ತು ದಿನಗಳಲ್ಲಿ ನೇಮಕಾತಿ ಪೂರ್ಣಗೊಳಿಸುವಂತೆ ಗಡುವು ನೀಡಿತ್ತು. ಮರುದಿನವೇ ಅಂದರೆ ಫೆಬ್ರವರಿ 4ರಂದು ಕೇಂದ್ರ ಸರ್ಕಾರ ಐವರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿತ್ತು.