Supreme Court, Enforcement Directorate 
ಸುದ್ದಿಗಳು

ಆಸ್ತಿ ವಶಪಡಿಸಿಕೊಳ್ಳುವ ಇ ಡಿ ಅಧಿಕಾರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಶಾಸಕ ವೀರೇಂದ್ರ ಪಪ್ಪಿ: ಕೇಂದ್ರಕ್ಕೆ ನೋಟಿಸ್

ವಿಚಾರಣೆಯ ವೇಳೆ, ನ್ಯಾಯಮೂರ್ತಿ ನರಸಿಂಹ ಅವರು "ಕಾಯ್ದೆಯಲ್ಲಿ (ಪಿಎಂಎಲ್‌ಎ) ದೋಷವಿದೆ" ಎನ್ನುವಂತೆ ತೋರುತ್ತಿದೆ ಎಂದು ಅವಲೋಕಿಸಿದರು. ನ್ಯಾಯಾಂಗೇತರ ಸದಸ್ಯರು ಸಂಕೀರ್ಣ ವಿಷಯಗಳನ್ನು ನಿರ್ಣಯಿಸುವ ಬಗ್ಗೆ ಅನುಮಾನಿಸಿದರು.

Bar & Bench

ನ್ಯಾಯಾಂಗದ ಪರಿಶೀಲನೆಯಿಲ್ಲದೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ 180 ದಿನಗಳವರೆಗೆ ಆಸ್ತಿಯನ್ನು ವಶಪಡಿಸಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರವನ್ನು ಪ್ರಶ್ನಿಸಿ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಸಲ್ಲಿಸಿರುವ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರದ ಪ್ರತಿಕ್ರಿಯೆಯನ್ನು ಕೋರಿದೆ [ಕೆ ಸಿ ವೀರೇಂದ್ರ ವಿರುದ್ಧ ಭಾರತ ಒಕ್ಕೂಟ ಮತ್ತು ಇತರರು].

ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಎ ಎಸ್ ಚಂದೂರ್ಕರ್ ಅವರ ಪೀಠವು ಅರ್ಜಿಯ ಸಂಬಂಧ ಡಿಸೆಂಬರ್ 12ರಂದು ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದೆ. ನ್ಯಾಯ ನಿರ್ಣಯ ಮಾಡುವ ಪಿಎಂಎಲ್‌ಎಯ ರಾಚನಿಕ ಸ್ವರೂಪದ ಸಾಂವಿಧಾನಿಕತೆಯನ್ನು ಪ್ರಶ್ನಿಸಿರುವ ಬಾಕಿ ಇರುವ ಇತರ ಅರ್ಜಿಗಳೊಂದಿಗೆ ಇದನ್ನು ಸಹ ಒಗ್ಗೂಡಿಸಿದ್ದು, ಅವುಗಳೊಟ್ಟಿಗೆಯೇ ಆಲಿಸಲಿದೆ.

ಗಮನಾರ್ಹ ಅಂಶವೆಂದರೆ, ಇ ಡಿ ಯು ಆಸ್ತಿಯನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿರುವುದು ಸಿಂಧುವೇ ಅಥವಾ ಅಲ್ಲವೇ ಎಂಬುದನ್ನು ಪರಿಶೀಲಿಸುವ ಕಾರ್ಯವನ್ನು ನ್ಯಾಯಾಂಗ ಹಿನ್ನೆಲೆಯಿಂದ ಬಂದಿರುವ ನ್ಯಾಯ ನಿರ್ಣಯಕಾರರು ಮಾಡುತ್ತಿಲ್ಲ ಎನ್ನುವ ಪ್ರಮುಖ ಕಳವಳವನ್ನು ಅರ್ಜಿಯಲ್ಲಿ ಎತ್ತಲಾಗಿದೆ.

ನಿನ್ನೆಯ ವಿಚಾರಣೆಯ ವೇಳೆ, ನ್ಯಾಯಮೂರ್ತಿ ನರಸಿಂಹ ಅವರು "ಕಾಯ್ದೆಯಲ್ಲಿ (ಪಿಎಂಎಲ್‌ಎ) ದೋಷವಿದೆ" ಎನ್ನುವಂತೆ ತೋರುತ್ತಿದೆ ಎಂದು ಹೇಳಿದರು. ಹೇಗೆ ನ್ಯಾಯಾಂಗೇತರ ಸದಸ್ಯರು ಆಸ್ತಿ ಹಕ್ಕುಗಳು ಮತ್ತು ಸಾಂವಿಧಾನಿಕ ಸುರಕ್ಷತೆಗಳನ್ನು ಒಳಗೊಂಡಂತಹ ಸಂಕೀರ್ಣ ವಿಷಯಗಳನ್ನು ನಿರ್ಣಯಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ನ್ಯಾಯಿಕ ಪ್ರಾಧಿಕಾರದ ರಚನೆ ಮತ್ತು ಪಿಎಂಎಲ್‌ಎ ಯ ಸೆಕ್ಷನ್ 20 ಮತ್ತು 21ರ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿದಾರರು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ನ್ಯಾಯಾಲಯವು ನೋಟಿಸ್ ನೀಡಿದೆ. ಪಿಎಂಎಲ್‌ಎಯ ಸೆಕ್ಷನ್ 6 ರ ಸಿಂಧುತ್ವದ ಕುರಿತು ಬಾಕಿ ಇರುವ ಪ್ರಕರಣಗಳ ಜೊತೆಗೆ ಈ ವಿಷಯವನ್ನು ವಿಚಾರಣೆ ನಡೆಸಬೇಕೆಂದು ಅದು ನಿರ್ದೇಶಿಸಿದೆ.

ವಿಚಾರಣೆಯ ವೇಳೆ, ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ ಮತ್ತು ರಂಜಿತ್ ಕುಮಾರ್ ವೀರೇಂದ್ರ ಪರವಾಗಿ ವಾದಿಸಿದರು. ತಮ್ಮ ವಾದದ ವೇಳೆ ಹೇಗೆ ಕಾನೂನಿನ ನಿಬಂಧನೆಗಳು ಇ ಡಿ ಗೆ ಯಾವುದೇ ಹೊಣೆಗಾರಿಕೆಯಿಲ್ಲದೆ ಅಧಿಕಾರ ಚಲಾಯಿಸುವ ಅವಕಾಶ ನೀಡುತ್ತವೆ ಎನ್ನುವುದನ್ನು ವಿವರಿಸಿದರು. ಇದು ವ್ಯಾಪಕ ಅಧಿಕಾರ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ವಾದಿಸಿದರು.

ಕರ್ನಾಟಕದ ಚಿತ್ರದುರ್ಗದ ಹಾಲಿ ಶಾಸಕ ಕಾಂಗ್ರೆಸ್‌ನ ವೀರೇಂದ್ರ ಪಪ್ಪಿ ಅವರು ಅರ್ಜಿಯಲ್ಲಿ ಇ ಡಿಯು ತಮ್ಮ ಬ್ಯಾಂಕ್ ಖಾತೆಗಳು, ಸ್ಥಿರ ಠೇವಣಿಗಳು, ಆಭರಣಗಳು ಮತ್ತು ವಾಹನಗಳು ಸೇರಿದಂತೆ ಎಲ್ಲಾ ಆಸ್ತಿಗಳನ್ನು ಯಾವುದೇ ಕಾರಣಗಳನ್ನು ನೀಡದೆ, ತನ್ನ ನಡೆಯನ್ನು ಪ್ರಶ್ನಿಸಲು ಅವಕಾಶವನ್ನೂ ಒದಗಿಸದೆ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಇಂತಹ ವ್ಯಾಪಕ ಅಧಿಕಾರಗಳು ಯಾವುದೇ ನ್ಯಾಯಾಂಗ ಪರಿಶೀಲನೆಗೆ ಅವಕಾಶವೂ ಇಲ್ಲದೆ ಇ ಡಿಯು ತನ್ನ ಅಧಿಕಾರವನ್ನು ಕನಿಷ್ಠ ಆರು ತಿಂಗಳ ಕಾಲ ಚಲಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ವಿಚಾರಣೆಯ ವೇಳೆ ಎರಡು ಪ್ರಮುಖ ಸವಾಲುಗಳ ಬಗ್ಗೆ ಪೀಠದ ಗಮನಸೆಳೆದರು. ಮೊದಲನೆಯದಾಗಿ, ಪಿಎಂಎಲ್‌ಎ ಸೆಕ್ಷನ್ 20 ಮತ್ತು 21, ಇದು ಇ ಡಿಗೆ 180 ದಿನಗಳವರೆಗೆ ಯಾವುದೇ ಕಾರಣಗಳನ್ನು ನೀಡದೆ ಆಸ್ತಿ ಮತ್ತು ದಾಖಲೆಗಳನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಎರಡನೆಯದಾಗಿ, ಪಿಎಂಎಲ್‌ಎಯ ನ್ಯಾಯ ನಿರ್ಣಯ ನೀಡುವ ಪ್ರಾಧಿಕಾರದ ಸಂಯೋಜನೆಯೇ ಸಮಸ್ಯಾತ್ಮಕವಾಗಿದ್ದು ಇದರಲ್ಲಿ ನ್ಯಾಯಾಂಗ ಹಿನ್ನೆಲೆಯಿಂದ ಬಂದವರಲ್ಲದ ಒಬ್ಬ ಸದಸ್ಯರು ಇರುತ್ತಾರೆ. ಇಡೀ ದೇಶಕ್ಕೆ, ಒಬ್ಬ ವ್ಯಕ್ತಿ ಮಾತ್ರ - ವೆಚ್ಚ ಲೆಕ್ಕಪತ್ರಾಧಿಕಾರಿ (ಕಾಸ್ಟ್‌ ಅಕೌಂಟೆಂಟ್‌) - ನ್ಯಾಯನಿರ್ಣಯ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗಮನಸೆಳೆದರು.

ಈ ಅಧಿಕಾರಿಯು ಇ ಡಿ ಅಧಿಕಾರಿಗಳು ದಾಳಿ ವೇಳೆ ವಶಕ್ಕೆ ಪಡೆದ ಹಾಗೂ ತಮ್ಮಲ್ಲಿಯೇ ಉಳಿಸಿಕೊಂಡಿರುವ ಶೇ.99ರಷ್ಟು ಪ್ರಕರಣಗಳನ್ನು ಅನುಮೋದಿಸಿದ್ದಾರೆ ಎಂದು ಅವರು ಸಮಸ್ಯೆಯ ಗಹನತೆಯನ್ನು ಪೀಠಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಇದು ನ್ಯಾಯನಿರ್ಣಯ ಪ್ರಾಧಿಕಾರಿಯು ತನ್ನ ವಿವೇಚನೆಯನ್ನು ಬಳಸದೆ ಕೇವಲ "ಅನುಮೋದಿಸುವ ಸಂಸ್ಥೆ" ಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸೂಚಿಸುತ್ತದೆ ಎಂದು ವಿವರಿಸಿದರು.

ಇ ಡಿಯ ಈ ಕಾರ್ಯಶೈಲಿಯು ಸಂವಿಧಾನದ 14 ಮತ್ತು 21ನೇ ವಿಧಿಗಳ ಅಡಿಯಲ್ಲಿ ದೊರೆತಿರುವ ಸಮಾನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ. ಇ ಡಿಯಿಂದ ಪೀಡಿತನಾದ ವ್ಯಕ್ತಿಗೆ ಯಾವುದೇ ಲಿಖಿತ "ನಂಬಲರ್ಹ ಕಾರಣಗಳನ್ನು" ಒದಗಿಸದೆ 180 ದಿನಗಳವರೆಗೆ ಆತನ ಆಸ್ತಿಯನ್ನು ವಶಪಡಿಸಿಕೊಳ್ಳಲು, ಸ್ಥಗಿತಗೊಳಿಸಲು ಮತ್ತು ಉಳಿಸಿಕೊಳ್ಳಲು ಇ ಡಿ ಗೆ ಅಧಿಕಾರ ನೀಡುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಇಂತಹ ನಿರ್ಣಾಯಕ ಅವಧಿಯಲ್ಲಿ ಸಂತ್ರಸ್ತರು ಕಾನೂನು ಪರಿಹಾರ ಪಡೆಯುವುದನ್ನು ಪ್ರಸಕ್ತ ವ್ಯವಸ್ಥೆಯು ತಡೆಯುತ್ತದೆ ಎಂದು ಹೇಳಲಾಗಿದೆ.

ರೋಹಟ್ಗಿ ಅವರು ವಿಚಾರಣೆಯ ವೇಳೆ, ಸಿಕ್ಕಿಂ ಹೈಕೋರ್ಟ್‌ನ ಈ ಹಿಂದಿನ ತೀರ್ಪನ್ನು ಪ್ರಸ್ತಾಪಿಸಿ, ಅರೆ-ನ್ಯಾಯಾಂಗ ಸಂಸ್ಥೆಗಳು ಕಾನೂನಿನಲ್ಲಿ ತರಬೇತಿ ಪಡೆದವರನ್ನು ಒಳಗೊಂಡಿರಬೇಕು ಎಂದು ಹೇಳಿರುವುದು ಸಾಂವಿಧಾನಿಕ ತತ್ವಕ್ಕೆ ಹೊಂದಿಕೆಯಾಗುತ್ತದೆ ಎಂದು ಗಮನಸೆಳೆದರು.

ಕಾನೂನು ಮತ್ತು ಸತ್ಯದ ಗಂಭೀರ ಪ್ರಶ್ನೆಗಳನ್ನು ಯಾವುದೇ ಕಾನೂನು ಹಿನ್ನೆಲೆಯಿಲ್ಲದ ಒಬ್ಬ ವ್ಯಕ್ತಿ ನಿರ್ಧರಿಸುತ್ತಿದ್ದಾರೆ ಮತ್ತು ಅಂತಹ ರಾಚನಿಕತೆಯು ನ್ಯಾಯ ನಿರ್ಣಯದ ಪರಿಕಲ್ಪನೆಯನ್ನೇ ಸೋಲಿಸುತ್ತದೆ ಎಂದು ಅವರು ಪ್ರಬಲವಾಗಿ ಪ್ರತಿಪಾದಿಸಿದರು.