National Highway 
ಸುದ್ದಿಗಳು

ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಅಕ್ರಮ ಡಾಬಾಗಳ ಹಾವಳಿ: ಸುಪ್ರೀಂ ಕಳವಳ, ಎನ್‌ಎಚ್‌ಎಐಗೆ ತರಾಟೆ

ಅನಧಿಕೃತ ಡಾಬಾಗಳ ವಿರುದ್ಧ ಕ್ರಮ ಕೈಗೊಳ್ಳಲು ಎನ್ಎಚ್ಎಐಗೆ ಇರುವ ಅಧಿಕಾರ ಏನು ಎಂಬುದನ್ನು ನ್ಯಾಯಾಲಯ ಪ್ರಶ್ನಿಸಿದ್ದು ಅಪಘಾತಗಳ ನಂತರ ಬೇರೆ ಅಧಿಕಾರಿಗಳನ್ನು ಹೊಣೆ ಮಾಡುತ್ತಲೇ ಇರುವಂತಿಲ್ಲ ಎಂದು ಹೇಳಿದೆ.

Bar & Bench

ರಾಷ್ಟ್ರೀಯ ಹೆದ್ದಾರಿಗಳ ಬದಿ ಇರುವ ಅಕ್ರಮ ಡಾಬಾಗಳು ಮತ್ತು ಅತಿಕ್ರಮಣದ ವಿರುದ್ಧ ಕ್ರಮ ಕೈಗೊಳ್ಳಲು ಏಕೆ ಆಗುತ್ತಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್ಎಚ್ಎಐ) ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ [ಫಲೋಡಿ ಅಪಘಾತಕ್ಕೆ ಸಂಬಂಸದಿಸಿದ ಸ್ವಯಂಪ್ರೇರಿತ ಪ್ರಕರಣ].

ಎನ್‌ಎಚ್‌ಎಐ ಈ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡುತ್ತಲೇ ಇರುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠ ಹೇಳಿದ್ದು ನೇರ ಕ್ರಮ ಕೈಗೊಳ್ಳಲು ಪ್ರಾಧಿಕಾರಕ್ಕೆ ಇರುವ ಅಧಿಕಾರದ ಬಗ್ಗೆ ವಿವರ ನೀಡುವಂತೆ ಸೂಚಿಸಿತು.

ಆದರೆ, ಅತಿಕ್ರಮಣಗಳ ವಿರುದ್ಧ ನೇರ ಕ್ರಮ ಕೈಗೊಳ್ಳುವ ಅಧಿಕಾರ ಎನ್ಎಚ್ಎಐಗೆ ಇದೆಯೇ ಅಥವಾ ಅದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆಯೇ ಎಂಬುದರ ಕುರಿತು ಪೀಠ ಸ್ಪಷ್ಟನೆ ಕೇಳಿತು.

ಇತರೆ ಇಲಾಖೆಗಳೊಂದಿಗಿನ ಪತ್ರವ್ಯವಹಾರ ಮಾತ್ರವಲ್ಲದೆ, ಕಾನೂನಿನಡಿಯಲ್ಲಿ ಎನ್ಎಚ್ಎಐನ ಅಧಿಕಾರ ವ್ಯಾಪ್ತಿಯನ್ನು ನ್ಯಾಯಾಲಯ ಅರ್ಥಮಾಡಿಕೊಳ್ಳಲು ಬಯಸುತ್ತದೆ ಎಂದು ನ್ಯಾಯಮೂರ್ತಿ ಮಹೇಶ್ವರಿ ಹೇಳಿದರು.

"ಗುತ್ತಿಗೆದಾರರು, ಪೊಲೀಸ್ ಅಧಿಕಾರಿಗಳು ಅಥವಾ ಸ್ಥಳೀಯ ಆಡಳಿತದ ಮೇಲೆ ಎನ್ಎಚ್ಎಐ ಕೆಸರು ಎರಚುತ್ತಿದೆ. ಎನ್ಎಚ್ಎಐ ನ ಅಧಿಕಾರಗಳ ನಿಲುವನ್ನು ನಾವು ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಕಾಯಿದೆ ಮತ್ತು ನಿಯಮಗಳು ಏನು ಹೇಳುತ್ತವೆ. ನಾವು ಎಲ್ಲವನ್ನೂ ಆಡಳಿತ ಅಧಿಕಾರಿಗಳ ಮೇಲೆ ಬಿಡಬಹುದೇ?" ಎಂದು ನ್ಯಾಯಮೂರ್ತಿ ಮಹೇಶ್ವರಿ ಕೇಳಿದರು.

ಕಾನೂನನ್ನು ಅಧ್ಯಯನ ಮಾಡಿ ಈ ವಿಷಯದ ಬಗ್ಗೆ ತಿಳಿಸುವುದಾಗಿ ಮೆಹ್ತಾ ಅವರು ಪ್ರತಿಕ್ರಿಯಿಸಿದರು.

ನ್ಯಾಯಮೂರ್ತಿ ಬಿಷ್ಣೋಯ್ ಅವರು, ಅತಿಕ್ರಮಣಗಳು ವ್ಯಾಪಕವಾಗಿದ್ದು, ಇದು ಹೆದ್ದಾರಿಗಳಲ್ಲಿ ಅಪಘಾತಗಳಿಗೆ ನೇರ ಕಾರಣವಾಗುತ್ತವೆ ಎಂದು ಹೇಳಿದರು.

ಪ್ರಕರಣ ಕೇವಲ ಡಾಬಾಗಳತ್ತ ಬೆರಳು ಮಾಡುತ್ತಿಲ್ಲ ಅತಿಕ್ರಮಣ ತಡೆಗಟ್ಟುವ ಮತ್ತು ರಸ್ತೆ ಸುರಕ್ಷತೆ ಖಾತ್ರಿಪಡಿಸುವ ಜವಾಬ್ದಾರಿಯುತ ಸಂಸ್ಥೆಗಳ ಹೊಣೆಗಾರಿಕೆಯನ್ನು ಹೇಳುತ್ತದೆ ಎಂದು ನ್ಯಾಯಪೀಠ ಅವಲೋಕಿಸಿತು.

ನಮಗೆ ಬೇಕಾಗಿರುವುದು ಕ್ರಮ ಕೈಗೊಳ್ಳುವ ಕುರಿತು ಕಾಯಿದೆ ಏನು ಹೇಳುತ್ತದೆ, ಜೊತೆಗೆ ತೆಗೆದುಕೊಂಡ ಕ್ರಮ ಹಾಗೂ ಕಾರ್ಯಗತಗೊಳಿಸದಿರಲು ಯಾರು ಜವಾಬ್ದಾರರು ಎಂಬುದು ಎಂದು ನ್ಯಾಯಮೂರ್ತಿ ಮಹೇಶ್ವರಿ ಹೇಳಿದರು.

ಈ ವೇಳೆ ಮೆಹ್ತಾ ಅವರು ' ನ್ಯಾಯಾಲಯ ವ್ಯಕ್ತಪಡಿಸಿದ ಎಲ್ಲಾ ಆತಂಕಗಳನ್ನು ಎನ್ಎಚ್ಎಐ ಪರಿಹರಿಸುತ್ತದೆ ಎಂದು ಭರವಸೆ ನೀಡಿದರು.

ದೇಶಾದ್ಯಂತ ರಸ್ತೆ ಸುರಕ್ಷತೆ ಸುಧಾರಿಸಲು ಸಾಮಾನ್ಯ ಮಾರ್ಗಸೂಚಿ ರೂಪಿಸಲು ನ್ಯಾಯಾಲಯ ಉದ್ದೇಶಿಸಿದೆ ಎಂದು ನ್ಯಾಯಮೂರ್ತಿ ಮಹೇಶ್ವರಿ ತಿಳಿಸಿದರು.

"ಭಾರತಾದ್ಯಂತ ಅನುಸರಿಸಬೇಕಾದ ಕೆಲವು ಸಾಮಾನ್ಯ ಮಾರ್ಗಸೂಚಿಗಳನ್ನು ನಾವು ಹೊರಡಿಸುತ್ತೇವೆ" ಎಂದು ನ್ಯಾಯಮೂರ್ತಿ ಹೇಳಿದರು.