ಸುಪ್ರೀಂ ಕೋರ್ಟ್‌ನಲ್ಲಿ ಡಿಜಿಟಲ್ ಸೌಕರ್ಯ ಹೆಚ್ಚಿಸುವ ಮಹತ್ವದ ಹೆಜ್ಜೆ ಎಂಬಂತೆ ವಕೀಲರು, ದಾವೆದಾರರು, ಮಾಧ್ಯಮದವರು ಹಾಗೂ ಇತರೆ ಭಾಗೀದಾರರಿಗೆ ಸರ್ವೋಚ್ಚ ನ್ಯಾಯಾಲಯ ಉಚಿತ ವೈ ಫೈ ಸೌಲಭ್ಯ ದೊರೆಯುವಂತೆ ಮಾಡಿದೆ.
ಸುಪ್ರೀಂ ಕೋರ್ಟ್‌ಗೆ ಭೇಟಿ ನೀಡುವವರಿಗೆ ಇಂದಿನಿಂದ ಈ ಸೌಲಭ್ಯ ಲಭಿಸಲಿದೆ.
ಯೋಜನೆಯ ಮೊದಲ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯ, ಸಂಖ್ಯೆ 2 ರಿಂದ 5ರವರೆಗೆ ಹಾಗೂ ಕಾರಿಡಾರ್ ಮತ್ತು ನ್ಯಾಯಾಲಯ ಮುಂಭಾಗಗಳ ಅಂಗಳ, I ಮತ್ತು IIನೇ ಮಾಧ್ಯಮ ಕೊಠಡಿಗಳು ಹಾಗೂ ಅಂಗಳದ ಮುಂಭಾಗದ ನಿರೀಕ್ಷಣಾ ಕೊಠಡಿಗಳಲ್ಲಿ ಸೌಲಭ್ಯವನ್ನು ಬಳಸಬಹುದಾಗಿದೆ.
ಬಳಕೆದಾರರ ಹೆಸರಾದ SCI_WiFi ಗೆ ಲಾಗ್ ಇನ್ ಆಗುವ ಮೂಲಕ ಸೌಲಭ್ಯ ಪಡೆಯಬಹುದಾಗಿದೆ. ಬಳಕೆದಾರರು ತನ್ನ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ನಂತರ ದೊರೆಯುವ ಒಟಿಪಿಯನ್ನು ದೃಢೀಕರಣ ಮತ್ತು ಲಾಗಿನ್‌ಗಾಗಿ ಉಪಯೋಗಿಸಬಹುದಾಗಿದೆ.
ಹಂತ ಹಂತವಾಗಿ ಎಲ್ಲಾ ನ್ಯಾಯಾಲಯ ಕೊಠಡಿಗಳು ಮತ್ತು ಅವುಗಳಿಗೆ ಹೊಂದಿಕೊಂಡ ಸ್ಥಳಗಳು, ವಕೀಲರ I ಮತ್ತು IIನೇ ಗ್ರಂಥಾಲಯಗಳು ಹಾಗೂ ವಕೀಲೆಯರ ಕೊಠಡಿಗಳು ಮತ್ತು ಸಭಾಂಗಣಗಳಿಗೆ ಉಚಿತ ಅಂತರ್ಜಾಲ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೊರಡಿಸಿದ ಸುತ್ತೋಲೆಯಲ್ಲಿ ವಿವರಿಸಲಾಗಿದೆ.