Justice Rajesh Bindal and Justice Aravind Kumar 
ಸುದ್ದಿಗಳು

ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಅರವಿಂದ್ ಕುಮಾರ್, ರಾಜೇಶ್ ಬಿಂದಾಲ್ ಪ್ರಮಾಣ ವಚನ ಸ್ವೀಕಾರ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಕನ್ನಡಿಗ ಅರವಿಂದ್ ಕುಮಾರ್, ನ್ಯಾ ರಾಜೇಶ್ ಬಿಂದಾಲ್ ಪ್ರಮಾಣ ವಚನ ಸ್ವೀಕಾರ.

Bar & Bench

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಕನ್ನಡಿಗ ಅರವಿಂದ್‌ ಕುಮಾರ್‌, ನ್ಯಾ ರಾಜೇಶ್‌ ಬಿಂದಾಲ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಸರ್ವೋಚ್ಚ ನ್ಯಾಯಾಲಯದ  ನ್ಯಾಯಮೂರ್ತಿಗಳ ಸಂಖ್ಯಾಬಲ 34ಕ್ಕೆ ಏರಿದ್ದು ಪೂರ್ಣ ಸಾಮರ್ಥ್ಯದೊಂದಿಗೆ ಅದು ಕಾರ್ಯ ನಿರ್ವಹಿಸಲಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಇಬ್ಬರೂ ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು.

ಜನವರಿ 31ರಂದು ಈ ಇಬ್ಬರೂ ನ್ಯಾಯಮೂರ್ತಿಗಳ ಪದೋನ್ನತಿಗೆ ಕೊಲಿಜಿಯಂ ಶಿಫಾರಸು ಮಾಡಿತ್ತು. ಫೆಬ್ರವರಿ 10ರಂದು ಕೇಂದ್ರ ಸರ್ಕಾರ ಇವರ ಹೆಸರನ್ನು ಅನುಮೋದಿಸಿತ್ತು.

ನ್ಯಾ. ಅರವಿಂದ್‌ ಕುಮಾರ್‌ ಅವರು ಜೂನ್ 2009 ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಡಿಸೆಂಬರ್ 2012ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿ ದೃಢೀಕರಿಸಲಾಯಿತು. ಅಕ್ಟೋಬರ್ 2021 ರಲ್ಲಿ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಪದೋನ್ನತಿ ಪಡೆದರು.

ಅಖಿಲ ಭಾರತ ಹಿರಿತನದ ಪ್ರಕಾರ, ನ್ಯಾ. ಅರವಿಂದ್‌ ಕುಮಾರ್ ಪ್ರಸ್ತುತ ಹೈಕೋರ್ಟ್ ನ್ಯಾಯಾಧೀಶರಲ್ಲಿ 26 ನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಇದಲ್ಲದೆ, ಅವರು ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಿಂದ ಬಂದಿರುವ ನ್ಯಾಯಮೂರ್ತಿಗಳಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿ ಎನಿಸಿಕೊಂಡಿದ್ದಾರೆ. ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ  ಕರ್ನಾಟಕ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಿದ್ದಾರೆ ಎಂಬ (ನ್ಯಾ. ಎಸ್‌ ರವೀಂದ್ರ ಭಟ್‌ ಹಾಗೂ ನ್ಯಾ. ಬಿ ವಿ ನಾಗರತ್ನ) ಕಾರಣಕ್ಕೆ ಕೊಲಿಜಿಯಂ ನ್ಯಾ. ಅರವಿಂದ್‌ ಕುಮಾರ್‌ ಅವರ ಹೆಸರನ್ನು ಪೀಠಕ್ಕೆ ಶಿಫಾರಸು ಮಾಡಿತ್ತು.

ನ್ಯಾ. ರಾಜೇಶ್ ಬಿಂದಾಲ್ ಅವರು ಮಾರ್ಚ್ 2006ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಂತಿಮವಾಗಿ 2021ರ ಅಕ್ಟೋಬರ್‌ನಲ್ಲಿ ಅಲಾಹಾಬಾದ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹಿರಿತನದ ಪ್ರಕಾರ, ನ್ಯಾ.ಬಿಂದಾಲ್ ಅವರು ದೇಶದ ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲೇ ಎರಡನೇ ಅತಿ ಹಿರಿಯವರಾಗಿದ್ದಾರೆ ಎಂದು ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಮಂಡಳಿಯಾದ ಕೊಲಿಜಿಯಂ ವಿವರಿಸಿತ್ತು.

ಅವರ ಹೆಸರನ್ನು ಶಿಫಾರಸು ಮಾಡುವಾಗ, ನ್ಯಾಯಮೂರ್ತಿ ಬಿಂದಾಲ್ ಅವರ ಪೋಷಕ ಹೈಕೋರ್ಟ್ ಆಗಿರುವ ಅತಿದೊಡ್ಡ ಹೈಕೋರ್ಟ್‌ಗಳಲ್ಲಿ ಒಂದೆನಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ  ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಪಕ ಪ್ರಾತಿನಿಧ್ಯವಿರಲಿಲ್ಲ ಎಂದು ಕೊಲಿಜಿಯಂ ಹೇಳಿತ್ತು.